ಕುವೈಟ್‌ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವೊಂದಕ್ಕೆ ಹುಸಿ ಬಾಂಬ್ ಕರೆಯೊಂದು ಬಂದ ಕಾರಣ ಮಸ್ಕತ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಒಮನ್ ಪೊಲೀಸರು ತಿಳಿಸಿದ್ದಾರೆ.
ಬೋಯಿಂಗ್ 737 ಪ್ರಯಾಣಿಕ ವಿಮಾನವು ಕುವೈಟ್‌ನಿಂದ ಮುಂಬೈಗೆ ಮಸ್ಕತ್ ಮಾರ್ಗವಾಗಿ ತೆರಳುತ್ತಿತ್ತು. ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಪ್ರಯಾಣಿಕನೊಬ್ಬ ವಿಮಾನದಲ್ಲಿದ್ದ ಸಿಬ್ಬಂದಿಗೆ ಹೇಳಿದ ಹಿನ್ನೆಲೆಯಲ್ಲಿ ತಕ್ಷಣವೇ ತುರ್ತು ಭೂಸ್ಪರ್ಶ ನಡೆಸಲಾಯಿತು.
ಸುಮಾರು 160 ಪ್ರಯಾಣಿಕರಿದ್ದ ವಿಮಾನವನ್ನು ಸಂಪೂರ್ಣ ತಪಾಸಣೆಗೊಳಪಡಿಸಲಾಯಿತು. ಆದರೆ ವಿಮಾನದಲ್ಲಿ ಯಾವುದೇ ಬಾಂಬ್ ಅಥವಾ ಸ್ಫೋಟಕ ಪದಾರ್ಥಗಳು ಪತ್ತೆಯಾಗದ ಕಾರಣ ಪ್ರಯಾಣ ಮುಂದುವರಿಸಲು ಅನುಮತಿ ನೀಡಲಾಯಿತು ಎಂದು ಒಮನ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕ ಸುಳ್ಳು ಹೇಳಿದ್ದನೇ, ಅಥವಾ ಆತನಿಗೆ ಯಾರಾದರೂ ಈ ಕುರಿತು ಮಾಹಿತಿ ನೀಡಿದ್ದರೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.