ಉಗ್ರಗಾಮಿಗಳ ಭರ್ಜರಿ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಪಾಕಿಸ್ತಾನದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯ ಕಾರಣದ ನೈಸರ್ಗಿಕ ಪ್ರವಾಹವನ್ನು ಸರಿಯಾಗಿ ನಿಭಾಯಿಸದಿರುವ ಪಾಕಿಸ್ತಾನ ಸರಕಾರವನ್ನು ಉರುಳಿಸಿ, ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪಾಕಿಸ್ತಾನೀ ಸೇನೆ ಯತ್ನಿಸುತ್ತಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ನೇತೃತ್ವದ ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿಗೆ ಹೊರತಾದ ರಾಷ್ಟ್ರೀಯ ಸರಕಾರವೊಂದರ ರಚನೆಗೆ ಸೇನೆ ಮತ್ತು ಅದರ ಮಿತ್ರರು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳು ಸುಳಿವು ನೀಡಿವೆ.
ಪಾಕಿಸ್ತಾನದಾದ್ಯಂತ ಭಾರೀ ಸಾವು-ನೋವಿಗೆ ಕಾರಣವಾಗಿರುವ ಪ್ರವಾಹದ ಬಳಿಕ ದೇಶ ಮುನ್ನಡೆಸಲು ಸಮರ್ಥರಾಗಿರುವ ವ್ಯಕ್ತಿಗಳಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಖಯಾನಿ ಹೆಸರು ಮಾತ್ರ ಕೇಳಿಬರುತ್ತಿದೆ. ಪ್ರವಾಹದ ಬಳಿಕ ನಾಮಾವಶೇಷಗೊಂಡಿರುವ ಸ್ಥಳಗಳ ಪುನರ್ನಿರ್ಮಾಣಕ್ಕಾಗಿ ಖಯಾನಿ ಅವರು ಸರಕಾರವನ್ನು ಉರುಳಿಸುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ಹೇಳಿವೆ.
ಆದರೆ, ಈ ಬೆದರಿಕೆಗಳನ್ನು ಪಾಕ್ ಸರಕಾರ ತಳ್ಳಿ ಹಾಕಿದೆ. ಪಾಕ್ ಸೇನೆಯು ಪ್ರಧಾನಿ ಆದೇಶದ ಅನುಸಾರ ಸಾಂವಿಧಾನಿಕ ಕರ್ತವ್ಯ ನಿಭಾಯಿಸುತ್ತಿದೆ. ಅದು ಶಿಸ್ತುಬದ್ಧ ಪಡೆಯಾಗಿದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ. ಅಂತೆಯೇ, ಕೆಲವು ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ಸರಕಾರವು ಉಗ್ರಗಾಮಿ ಸಂಘಟನೆಗಳಾದ ಲಷ್ಕರ್ ಇ ತೋಯ್ಬಾ ಮತ್ತು ಜಮಾತೆ ಇಸ್ಲಾಮಿ ಮುಂತಾದವುಗಳಿಗೆ ಬಿಟ್ಟುಕೊಟ್ಟಿದೆ ಎಂಬ ಆರೋಪಗಳನ್ನೂ ಅವರು ನಿರಾಕರಿಸಿದ್ದಾರೆ.