ಪರಿಹಾರ ಹೆಸರಲ್ಲಿ ನಿಧಿ ಸಂಗ್ರಹ: ಉಗ್ರರಿಗೆ ಪಾಕ್ ಎಚ್ಚರಿಕೆ
ಇಸ್ಲಾಮಾಬಾದ್, ಶನಿವಾರ, 21 ಆಗಸ್ಟ್ 2010( 19:45 IST )
ಪ್ರವಾಹ ಪರಿಹಾರ ಕಾರ್ಯಾಚರಣೆಯ ಸೋಗಿನಲ್ಲಿ ನಿಧಿ ಸಂಗ್ರಹಿಸುತ್ತಾ, ಇಸ್ಲಾಮಿಕ್ ಉಗ್ರಗಾಮಿಗಳಿಗೆ ಸಂಬಂಧ ಹೊಂದಿರುವ ಸೇವಾ ಸಂಸ್ಥೆಗಳ ಪದಾಧಿಕಾರಿಗಳನ್ನು ಬಂಧಿಸುವುದಾಗಿ ಪಾಕಿಸ್ತಾನವು ಎಚ್ಚರಿಕೆ ನೀಡಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈ ಉಗ್ರಗಾಮಿ ಸಂಘಟನೆಗಳ ಪಾತ್ರದಿಂದಾಗಿ, ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟಕ್ಕೆ ಹಿನ್ನಡೆಯಾಗಬಹುದೆಂಬ ಆತಂಕ ಪಾಕಿಸ್ತಾನಕ್ಕೆ.
2008ರ ಮುಂಬೈ ದಾಳಿ ಸಂಘಟಿಸಿದ ಉಗ್ರಗಾಮಿ ಸಂಘಟನೆಗಳೂ ಸೇರಿದಂತೆ ಹಲವು ಭಯೋತ್ಪಾದಕ ಗುಂಪುಗಳು ಸರಕಾರ ನಿಧಾನಿಸಿದ ಕಡೆಯಲ್ಲೆಲ್ಲಾ ಹೋಗಿ ಪ್ರವಾಹ ಪರಿಹಾರ ಕಾರ್ಯಕ್ರಮಗಳಲ್ಲಿ ತೊಡಗಿದ್ದು, ಜನರ ಪ್ರೀತಿ ಗಳಿಸಲು ಪ್ರಯತ್ನಿಸುತ್ತಿವೆ.
ಮೂರು ವಾರಗಳ ಹಿಂದೆ ಉಂಟಾದ ಪ್ರವಾಹದಿಂದಾಗಿ 2000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡಿದ್ದಾರೆ.
ಹಲವು ಪ್ರದೇಶಗಳಲ್ಲಿ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳು ಆರೋಗ್ಯ ಸೇವೆ, ಆಹಾರ ಪೂರೈಕೆ ಇತ್ಯಾದಿ ಪರಿಹಾರ ಕಾರ್ಯಗಳಲ್ಲಿ ನಿರತವಾಗಿದ್ದು, ತಮ್ಮ ಬಲ ಹೆಚ್ಚಿಸಿಕೊಳ್ಳಲು ಈ ಭಯೋತ್ಪಾದಕ ಸಂಘಟನೆಗಳು ಅವಕಾಶವನ್ನು ಬಳಸಿಕೊಳ್ಳುತ್ತಿವೆ ಎಂಬ ಬಗ್ಗೆ ಆತಂಕ ಎಲ್ಲೆಡೆ ವ್ಯಕ್ತವಾಗಿದೆ.
ನಿಷೇಧಿತ ಸಂಘಟನೆಗಳು ಪ್ರವಾಹಪೀಡಿತ ಪ್ರದೇಶಕ್ಕೆ ಕಾಲಿಡದಂತೆ ನಿಷೇಧ ಹೇರಲಾಗಿದೆ ಎಂದು ಒಳಾಡಳಿತ ಸಚಿವ ರಹಮಾನ್ ಮಲಿಕ್ ಹೇಳಿದ್ದಾರೆ. ನಿಧಿ ಸಂಗ್ರಹ ಮಾಡುತ್ತಿರುವ ನಿಷೇಧಿತ ಸಂಘಟನೆಗಳ ಸದಸ್ಯರನ್ನು ನಾವು ಬಂಧಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.