ಭಾರತೀಯ ಜೈಲುಗಳಲ್ಲಿರುವ ಪಾಕಿಸ್ತಾನಿ ಕೈದಿಗಳಿಗೆ 'ಚಿತ್ರಹಿಂಸೆ' ನೀಡಲಾಗುತ್ತಿದೆ, ಭಾರತೀಯ ಬೇಹುಗಾರರಿಗೆ ಪಾಕಿಸ್ತಾನಕ್ಕೆ ನುಸುಳಲು ಅನುಕೂಲವಾಗುವಂತೆ ಅವರ 'ಗುರುತು ಪತ್ರಗಳನ್ನು ಕದಿಯಲಾಗುತ್ತಿದೆ' ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆಯೊಂದು ಸಂಪಾದಕೀಯದಲ್ಲಿ ಆರೋಪಿಸಿದೆ ಮಾತ್ರವಲ್ಲದೆ, ಪಾಕಿಸ್ತಾನೀ ಜೈಲಿನಲ್ಲಿರುವ ಭಾರತೀಯರಿಗೂ ಇದೇ ರೀತಿ ಮಾಡಬೇಕು ಎಂದು ಒತ್ತಾಯಿಸಿದೆ.
ಹೆಚ್ಚಿನ ಪಾಕಿಸ್ತಾನಿ ಕೈದಿಗಳು ತಮಗೆ ತಿಳಿಯದೆಯೇ ಗಡಿ ದಾಟಿದವರು ಎಂದು ನವಾ-ಇ-ವಕ್ತ್ ಪತ್ರಿಕೆಯ ಸಂಪಾದಕೀಯ ಹೇಳಿದೆ. ಸಾಮಾನ್ಯ ಶಿಷ್ಟಾಚಾರದಂತೆ ಯಾವುದೇ ದೇಶದ ಗಡಿ ದಾಟಿ ಬಂದವರನ್ನು ಕೆಲವು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿ, ಸಂಬಂಧಿತ ದೇಶದ ಅಧಿಕಾರಿಗಳ ಕೈಗೆ ಒಪ್ಪಿಸಬೇಕಾಗುತ್ತದೆ. ಆದರೆ ಭಾರತ ಈ ರೀತಿ ಮಾಡುತ್ತಿಲ್ಲ ಎಂದು ಆರೋಪಿಸಿದೆ.
ಭಾರತೀಯ ಪೊಲೀಸರು ಇಂತಹಾ ಕೈದಿಗಳನ್ನೇ ಗುರಿಯಾಗಿರಿಸಿ, ಅವರನ್ನು ಅಮಾನವೀಯವಾಗಿ ನಡೆಸುಕೊಳ್ಳುತ್ತಾರೆ. ಹಲವು ವರ್ಷಗಳ ಕಾಲ ಜೈಲಿನಲ್ಲಿ ಇರಿಸಿಕೊಳ್ಳುತ್ತಾರೆ. ಅತ್ಯಂತ ಬರ್ಬರ ಹಿಂಸೆ ನೀಡಲಾಗುತ್ತದೆ, ಮತ್ತು ಅವರ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡು, ಭಾರತೀಯ ಏಜೆಂಟರಿಗೆ, ಬೇಹುಗಾರರಿಗೆ ನೀಡಲಾಗುತ್ತದೆ. ಅದನ್ನು ಬಳಸಿ ನಕಲಿ ಪಾಸ್‌ಪೋರ್ಟ್‌ಗಳು ಮತ್ತಿತರ ದಾಖಲೆಗಳನ್ನು ಸೃಷ್ಟಿ ಮಾಡಿ ಪಾಕಿಸ್ತಾನದೊಳಕ್ಕೆ ಬೇಹುಗಾರಿಕೆ ನಡೆಸಲು ಕಳುಹಿಸಲಾಗುತ್ತದೆ ಎಂದು ಅದು ಆರೋಪಿಸಿದೆ.