ಪಾಕ್‌ಗೆ ನೆರವು ನೀಡಿದ್ದು ಭಾರತದ ಅಭೂತಪೂರ್ವ ನಡೆ: ಅಮೆರಿಕ
ವಾಷಿಂಗ್ಟನ್, ಭಾನುವಾರ, 22 ಆಗಸ್ಟ್ 2010( 13:09 IST )
ಪಾಕಿಸ್ತಾನದ ನೆರೆ ದುರಂತಕ್ಕೆ ಭಾರತ ನೆರವು ನೀಡಲು ಮುಂದಾದುದನ್ನು ಅಮೆರಿಕ ಸ್ವಾಗತಿಸಿದೆ. ಜೊತೆಗೆ ಇದೊಂದು ಅಭೂತಪೂರ್ವ ನಡೆ ಎಂದು ಭಾರತವನ್ನು ಕೊಂಡಾಡಿದೆ.
ಆರಂಭದಲ್ಲಿ ಭಾರತದ ನೆರವಿನ ಪ್ರಸ್ತಾಪವನ್ನು ನಿರಾಕರಿಸಿದ್ದ ಪಾಕ್, ನಂತರ 50 ದಶಲಕ್ಷ ಡಾಲರ್ ಪರಿಹಾರವನ್ನು ಸ್ವೀಕರಿಸಿತ್ತು. ಜೊತೆಗೆ ಇನ್ನೂ ಹೆಚ್ಚಿನ ನೆರವು ನೀಡುವ ಬಗ್ಗೆ ಭಾರತ ಸರ್ಕಾರ ಪಾಕಿಸ್ತಾನಕ್ಕೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಮೆರಿಕ, ಭಾರತ ಅತ್ಯಪೂರ್ವ ನಿರ್ಧಾರ ಕೈಗೊಂಡು ಪಾಕಿಸ್ತಾನಕ್ಕೆ ನೆರವು ನೀಡಿದ್ದು ಗಮನಾರ್ಹ ಬೆಳವಣಿಗೆ ಎಂದಿದೆ.
20 ಮಿಲಿಯನ್‌ಗೂ ಅಧಿಕ ಮಂದಿ ಈ ನೆರೆ ಹಾವಳಿಯಿಂದ ಸಂತ್ರಸ್ತರಾಗಿದ್ದು, ಇಂಥ ಸಂದರ್ಭದಲ್ಲಿ ಭಾರತ ಮಾನವೀಯತೆ ಮೆರೆದಿದೆ. ಆ ಮೂಲಕ ಶತ್ರು ರಾಷ್ಟ್ರಕ್ಕೆ ಹಣದ ಸಹಾಯವನ್ನು ಮಾಡಿದ್ದು ಘನತೆ ಮೆರೆದಿದೆ ಎಂದು ಯುಎಸ್ ಹೇಳಿದೆ.
ಯುಎಸ್ ಕೂಡಾ ಪಾಕಿಸ್ತಾನದೆಡೆಗೆ ನೆರವಿನ ಹಸ್ತ ನೀಡಿದ್ದು ಈಗಾಗಲೇ ಅಧಿಕೃತವಾಗಿ 150 ಮಿಲಿಯನ್ ಯುಎಸ್ ಡಾಲರ್ ನೀಡುವುದಾಗಿ ಘೋಷಿಸಿದೆ. ಜೊತೆಗೆ, ಯುಎಸ್ ಈ ಹಿನ್ನೆಲೆಯಲ್ಲಿ ತಾನು 90,000 ಯುಎಸ್ ಡಾಲರ್ ಗಿಂತಲೂ ಹೆಚ್ಚು ಹಣ ಸಂಗ್ರಹಿಸಿರುವುದಾಗಿಯೂ ಹೇಳಿದೆ.