'ತಾಲಿಬಾನ್ ಉಗ್ರರು ಪಾಕಿಸ್ತಾನವನ್ನು ಹೊರಗಿಟ್ಟು ಅಥವಾ ಅಮೆರಿಕದ ಅನುಮತಿ ಇಲ್ಲದೆ ಅಫ್ಘಾನಿಸ್ತಾನ ಸರಕಾರದ ಜೊತೆ ಮಾತುಕತೆ ನಡೆಸಿದರೆ ಹುಷಾರ್' ಎಂದು ಪಾಕಿಸ್ತಾನ ಮಿಲಿಟರಿ ಗುಪ್ತಚರ ಏಜೆನ್ಸಿ ಐಎಸ್ಐ ಎಚ್ಚರಿಕೆ ನೀಡಿದೆ.
ತಾಲಿಬಾನ್ ಮುಖಂಡರು ಯಾವುದೇ ಕಾರಣಕ್ಕೂ ಮುಕ್ತವಾಗಿ ಅಫ್ಘಾನ್ ಜೊತೆ ಮಾತುಕತೆ ನಡೆಸಬಾರದು ಎಂದು ಪಾಕಿಸ್ತಾನಿ ಭದ್ರತಾ ಅಧಿಕಾರಿಯೊಬ್ಬರು ಎಚ್ಚರಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.
ಆ ನಿಟ್ಟಿನಲ್ಲಿ ತಾಲಿಬಾನ್ ಮುಖಂಡರು ಸೋಗಲಾಡಿತನಕ್ಕೆ ಮುಂದಾಗಬಾರದು ಎಂದು ಐಎಸ್ಐ ಸ್ಪಷ್ಟ ಸಂದೇಶ ರವಾನಿಸಿರುವುದಾಗಿ ವಿದೇಶಿ ರಾಯಭಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಕಳೆದ ಜನವರಿ ತಿಂಗಳಿನಲ್ಲಿ ತಾಲಿಬಾನ್ ಎರಡನೇ ಹಂತದ ಮುಖಂಡ ಮುಲ್ಲಾ ಅಬ್ದುಲ್ ಘನಿ ಬಾರ್ದಾರ್‌ನನ್ನು ಪಾಕಿಸ್ತಾನದ ಐಎಸ್ಐ ಅಮೆರಿಕದ ಸಿಐಎ ನೆರವಿನಿಂದ ಬಂಧಿಸಿತ್ತು. ತಾಲಿಬಾನ್ ಮುಖಂಡರು ಅಫ್ಘಾನ್ ಜೊತೆ ರಹಸ್ಯ ಮಾತುಕತೆ ನಡೆಸುವ ಸಿದ್ದತೆ ನಡೆಸುತ್ತಿದ್ದಾರೆಂದು ತನಿಖೆಯ ವೇಳೆಯಲ್ಲಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಐಎಸ್ಐ ಈ ಎಚ್ಚರಿಕೆ ನೀಡಿದೆ.
ಆ ನಿಟ್ಟಿನಲ್ಲಿ ತಾಲಿಬಾನ್ ಪಾಕಿಸ್ತಾನವನ್ನು ಹೊರಗಿಟ್ಟು ಅಫ್ಘಾನ್ ಸರಕಾರದ ಜೊತೆ ಮಾತುಕತೆ ನಡೆಸಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದೆ. ಬಾರ್ದಾರ್ ಬಂಧನದ ನಂತರ ಸುಮಾರು 23 ತಾಲಿಬಾನ್ ಮುಖಂಡರನ್ನು ಸೆರೆ ಹಿಡಿದಿತ್ತು. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನ ಸರಕಾರದ ಕೃಪಾಕಟಾಕ್ಷದಲ್ಲಿಯೇ ಕಾಲ ಕಳೆಯುತ್ತಿದ್ದಾರೆ.