ಫಿಲಿಪೈನ್ಸ್‌ನಲ್ಲಿ ಬಸ್ ಒತ್ತೆಯಾಗಿಟ್ಟುಕೊಂಡಿದ್ದ ಮಾಜಿ ಪೊಲೀಸ್ ಅಧಿಕಾರಿಯನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಲ್ಲುವುದರೊಂದಿಗೆ ಹೈಜಾಕ್ ಪ್ರಕರಣ ಅಂತ್ಯಕಂಡಿದೆ. ಆದರೆ ಘಟನೆಯಲ್ಲಿ ಏಳು ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಸುಮಾರು 12 ಗಂಟೆಗಳ ಕಾಲ ಅಪಹರಣಕಾರ ಬಸ್ ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದ. 15 ಪ್ರಯಾಣಿಕರನ್ನು ಬಿಡುಗಡೆ ಮಾಡುವ ಯಾವುದೇ ಸೂಚನೆಗಳು ಕಂಡು ಬರದೇ ಇದ್ದಾಗ ಮನಿಲಾದ ಭದ್ರತಾ ಪಡೆಗಳು ಬಸ್ಸಿನ ಸುತ್ತ ನೆರೆದು ದಾಳಿ ನಡೆಸಿದ್ದವು. ಈ ಹೊತ್ತಿನಲ್ಲಿ ಏಳು ಮಂದಿ ಬಲಿಯಾಗಿದ್ದಾರೆ. ಅವರೆಲ್ಲರೂ ಚೀನಾ ಪ್ರಜೆಗಳು ಎಂದು ವರದಿಗಳು ಹೇಳಿವೆ.
ಬದುಕುಳಿದವರಲ್ಲಿ ಐದು ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ. ಬಸ್ ಚಾಲಕ ಕಾರ್ಯಾಚರಣೆ ಆರಂಭವಾಗುವ ಹೊತ್ತಿಗೆ ಅಪಹರಣಕಾರನಿಂದ ತಪ್ಪಿಸಿಕೊಂಡಿದ್ದ.
ಅದಕ್ಕೂ ಮೊದಲು ಬಸ್ಸಿನಲ್ಲಿ 16 ಪ್ರಯಾಣಿಕರಿದ್ದರು. ಮಾಜಿ ಪೊಲೀಸ್ ಅಧಿಕಾರಿಯಾಗಿರುವ ಈತನನ್ನು ಕರ್ತವ್ಯ ಲೋಪದ ಮೇಲೆ ವಜಾಗೊಳಿಸಲಾಗಿತ್ತು. ಇದರ ವಿರುದ್ಧ ಈ ರೀತಿಯಾಗಿ ಆತ ಪ್ರತಿಭಟನೆ ನಡೆಸಿ ಬೇಡಿಕೆ ಮುಂದಿಟ್ಟಿದ್ದ.
ಇಂದು ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಿರುವ ಈ ನಾಟಕೀಯ ಬೆಳವಣಿಗೆ ಅಪರಾಹ್ನ ಮೂರು ಗಂಟೆ ಹೊತ್ತಿಗೆ ಸುಖಾಂತ್ಯ ಕಾಣಬೇಕಿತ್ತು. ಆದರೆ ಸಂಧಾನ ಯತ್ನಗಳು ಯಾವುದೇ ಫಲಿತಾಂಶವನ್ನು ನೀಡಿರದ ಕಾರಣ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದರು.
ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ರೊನಾಲ್ಡೋ ಮೆಂಡೋಜಾ. ಈತನಲ್ಲಿ ಸ್ವಯಂಚಾಲಿತ ರೈಫಲ್ ಮತ್ತು ಇತರ ಶಸ್ತ್ರಾಸ್ತ್ರಗಳಿದ್ದವು. 'ಬೃಹತ್ ವ್ಯವಹಾರ ಅಪರಾಹ್ನ ಮೂರು ಗಂಟೆಯ ನಂತರ' ಎಂದು ತನ್ನ ಕೈಬರಹದಲ್ಲಿ ಬರೆದಿರುವ ನೋಟ್ ಒಂದನ್ನು ಬಸ್ಸಿನ ಬಾಗಿಲಿಗೆ ಅಂಟಿಸಿದ್ದ ರೋನಾಲ್ಡೋ, ಯಾವುದೇ ಮಾತುಕತೆಗೆ ಆಸಕ್ತಿ ತೋರಿಸಿರಲಿಲ್ಲ.
ರೊನಾಲ್ಡೋ ಸಹೋದರನ ಪ್ರಕಾರ, ಪೊಲೀಸ್ ಪಡೆಯಿಂದ ವಜಾಗೊಳಿಸಿದ್ದು ಮತ್ತು ಆತನನ್ನು ಉಪಚರಿಸಿದ ರೀತಿಯಿಂದ ಆತ ಅಸಮಾಧಾನಗೊಂಡಿದ್ದ. ಸೇವೆಯಿಂದ ಅಸಮರ್ಥನೀಯ ರೀತಿಯಲ್ಲಿ ತೆಗೆದು ಹಾಕಿದ್ದೇ ಆತನ ಸಮಸ್ಯೆ ಎಂದಿದ್ದಾನೆ.
ಈ ನಡುವೆ ರೊನಾಲ್ಡೋ ಸಂಧಾನ ಮಾತುಕತೆಗಾಗಿ ಮಾಧ್ಯಮದವನ್ನು ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದ. ಹಾಗಾದಲ್ಲಿ ನ್ಯಾಯಸಮ್ಮತ ಮತ್ತು ಯಶಸ್ವಿ ಮಾತುಕತೆಯೆನಿಸಬಹುದು ಎಂದು ಆತ ತಿಳಿಸಿದ್ದ.
ತನ್ನನ್ನು ಪೊಲೀಸ್ ಪಡೆಗೆ ಮರು ನೇಮಕಗೊಳಿಸಬೇಕೆಂಬುದೇ ಆತನ ಬೇಡಿಕೆ. ಇದನ್ನು ಫಿಲಿಪೈನ್ಸ್ ಸರಕಾರ ಪರಿಗಣಿಸಬೇಕೆಂದು ಭರವಸೆ ನೀಡಿದಲ್ಲಿ ತಾನು ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ. ಈ ಸಂಬಂಧ ಆತನ ಪತ್ನಿಯೂ ಸಂಧಾನಕ್ಕೆ ಯತ್ನಿಸಿದ್ದಳು. ಯಾವುದೂ ಫಲ ನೀಡದೇ ಇದ್ದಾಗ ಪೊಲೀಸರು ದಾಳಿ ನಡೆಸಬೇಕಾಯಿತು ಎಂದು ವರದಿಗಳು ಹೇಳಿವೆ.
ತನ್ನ ಬೇಡಿಕೆಗಳನ್ನು ಕಾಗದಗಳ ಮೂಲಕ ರೊನಾಲ್ಡೋ ತಿಳಿಸುತ್ತಿದ್ದ. ಆಗಾಗ ಬಸ್ಸಿನ ಕಿಟಕಿಯ ಮೂಲಕ ಪತ್ರಗಳನ್ನು ಹೊರಗೆಸೆಯುವ ಮೂಲಕ ಪರೋಕ್ಷ ಮಾತುಕತೆ ನಡೆಸುತ್ತಿದ್ದ.
ಈ ಬಸ್ಸಿನಲ್ಲಿ ಒಟ್ಟು 25 ಮಂದಿ ಪ್ರಯಾಣಿಕರಿದ್ದರು. ಆದರೆ ಮೂರು ಗಂಟೆಗೂ ಮೊದಲು ಒಂಬತ್ತು ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದ. ನಂತರ 16 ಮಂದಿ ಉಳಿದುಕೊಂಡಿದ್ದರು ಎಂದು ವರದಿಗಳು ಹೇಳಿವೆ.