ಪೊಲೀಸ್ ಅಧಿಕಾರಿಗಳ ಎದುರೇ ಇಬ್ಬರು ಹುಡುಗರನ್ನು ಗ್ರಾಮಸ್ಥರು ಪೈಶಾಚಿಕ ರೀತಿಯಲ್ಲಿ ಹೊಡೆದು ಸಾಯಿಸಿರುವ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆ ನಡೆದಿರುವುದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್ ಜಿಲ್ಲೆಯಲ್ಲಿ. ಆಗಸ್ಟ್ 15ರಂದು ಇಲ್ಲಿನ ನೂರಾರು ಮಂದಿ ದೊಣ್ಣೆ ಮತ್ತು ಕಬ್ಬಿಣದ ರಾಡಿನಿಂದ ಹೊಡೆದು ಸಾಯಿಸಿದ್ದರು. ಇದರ ವೀಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಆಘಾತ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ತನಿಖೆಗೆ ಆದೇಶ ನೀಡಿದೆ. ಘಟನೆಗೆ ಸರಕಾರವೂ ಅಚ್ಚರಿ ವ್ಯಕ್ತಪಡಿಸಿದೆ.
ಹಫೀಜ್ ಮುಗೀಸ್ (21) ಮತ್ತು ಹಫೀಜ್ ಮುನೀಬ್ (16) ಎಂಬ ಸಹೋದರರು ಕ್ರಿಕೆಟ್ ಪಂದ್ಯವೊಂದಕ್ಕಾಗಿ ತೆರಳುತ್ತಿದ್ದಾಗ ಕಳ್ಳರೆಂದು ತಪ್ಪು ತಿಳಿದು ಗ್ರಾಮಸ್ಥರು ಹೊಡದು ಕೊಂದಿದ್ದಾರೆ ಎಂದು ವರದಿ ಹೇಳುತ್ತಿದ್ದರೆ, ಇನ್ನೊಂದು ವರದಿಯ ಪ್ರಕಾರ ಕ್ರಿಕೆಟ್ ಸಂಬಂಧಿ ಹಳೆ ದ್ವೇಷಕ್ಕಾಗಿ ಹೀಗೆ ಮಾಡಲಾಗಿದೆ.
ದೆವ್ವ ಮೈಮೇಲೆ ಬಂದಂತೆ ವರ್ತಿಸುತ್ತಿದ್ದ ಗ್ರಾಮಸ್ಥರಿಂದ ಇಂತಹ ಅಮಾನವೀಯ ಕೃತ್ಯ ನಡೆಯುತ್ತಿದ್ದರೂ, ಸಿಯಾಲ್‌ಕೋಟ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಕಾರ್ ಚೌಹಾನ್ ಮತ್ತು ಇತರ ಎಂಟು ಮಂದಿ ಪೊಲೀಸರು ಘಟನೆಯನ್ನು ತಡೆಯುವ ಬದಲು ಮೂಕಪ್ರೇಕ್ಷಕರಂತೆ ನಿಂತು ನೋಡಿದ್ದರು. ಇವರ ವಿರುದ್ಧ ಕಠಿಣ ಕ್ರಮದ ಭರವಸೆಯನ್ನು ಸರಕಾರವೂ ನೀಡಿದೆ.
ಮುಗೀಸ್ ಮತ್ತು ಮುನೀಬ್ ಇಬ್ಬರನ್ನೂ ಕೆಲ ಮಂದಿ ನೆಲಕ್ಕೆ ಕೆಡವಿ ಕಬ್ಬಿಣದ ರಾಡು ಮತ್ತು ಕಟ್ಟಿಗೆ ತುಂಡುಗಳಿಂದ ನಿರಂತರವಾಗಿ ಹೊಡೆದು ಸಾಯಿಸಿದ ನಂತರ, ತಲೆ ಕೆಳಗೆ - ಕಾಲು ಮೇಲೆ ಮಾಡಿ ನೇತು ಹಾಕಿದ್ದರು. ಇದನ್ನು ಟೀವಿ ವಾಹಿನಿಗಳು ನಿರಂತರವಾಗಿ ಪ್ರಸಾರ ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿದ್ದವು.
ಪೊಲೀಸರಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಸಾವನ್ನಪ್ಪಿರುವ ಸಹೋದರರು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಬಟ್ಟಾರ್ ಗ್ರಾಮಕ್ಕೆ ತೆರಳುತ್ತಿದ್ದರು; ಆಗ ಕೆಲವು ವ್ಯಕ್ತಿಗಳು ಇವರನ್ನು ದರೋಡೆಕೋರರು ಎಂದು ಆರೋಪಿಸಿ ವಶಕ್ಕೆ ತೆಗೆದುಕೊಂಡಿದ್ದರು.
ಘಟನೆಯಿಂದ ತೀವ್ರ ಆಘಾತ ಅನುಭವಿಸಿರುವ ಬಲಿಪಶುಗಳ ಕುಟುಂಬವು ನ್ಯಾಯಕ್ಕಾಗಿ ಮೊರೆ ಇಟ್ಟಿದೆ. ಅಲ್ಲದೆ ತಮ್ಮ ಮಕ್ಕಳನ್ನು ರಕ್ಷಿಸಲು ವಿಫಲವಾಗಿರುವ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.