ಮಾವೋ ವರಿಷ್ಠ ಪುಷ್ಪಾ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ ಸೋಮವಾರ ಕೂಡ ಪ್ರಧಾನಿ ಆಯ್ಕೆಗಾಗಿ ನಡೆದ ಐದನೇ ಸುತ್ತಿನ ಚುನಾವಣೆಯಲ್ಲೂ ಬಹುಮತ ಪಡೆಯುವಲ್ಲಿ ವಿಫಲರಾಗುವ ಮೂಲಕ ನೇಪಾಳ ಸಂಸತ್‌ನ ಪ್ರಧಾನಿ ಆಯ್ಕೆ ಕಸರತ್ತು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದಂತಾಗಿದೆ.
ಇಂದು ನಡೆದ ಐದನೇ ಸುತ್ತಿನ ಪ್ರಧಾನಿ ಆಯ್ಕೆ ಚುನಾವಣೆಯಲ್ಲಿ ತೆರಾಯ್ ಬುಡಕಟ್ಟು ಜನಾಂಗದ ಪಕ್ಷದ ಬೆಂಬಲದೊಂದಿಗೆ ಗೆಲುವು ಸಾಧಿಸುವ ಭರವಸೆ ಹೊಂದಿದ್ದ ಪ್ರಚಂಡ ಅವರು 599 ಸದಸ್ಯ ಬಲ ಹೊಂದಿರುವ ಸಂಸತ್‌ನಲ್ಲಿ ಕೇವಲ 246 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಏತನ್ಮಧ್ಯೆ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ಪೌಡ್ಯಾಲ್ ಕೂಡ ಬಹುಮತ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಈ ಮೊದಲು ನಡೆದ ನಾಲ್ಕು ಚುನಾವಣೆಯಲ್ಲಿಯೂ 55ರ ಹರೆಯದ ಪ್ರಚಂಡ ಅವರು ಬಹುಮತ ಪಡೆಯುವಲ್ಲಿ ವಿಫಲರಾಗಿದ್ದರು. ನೇಪಾಳ ಸಂಸತ್‌ನಲ್ಲಿ ಮಾವೋವಾದಿ ಪಕ್ಷ ಬಹುದೊಡ್ಡ ಪಕ್ಷವಾಗಿದೆ. ಆ ನಿಟ್ಟಿನಲ್ಲಿ ಮಾದೇಶಿ ಪಕ್ಷದ ಸುಮಾರು 82 ಸಂಸದರ ಬೆಂಬಲದೊಂದಿಗೆ ಬಹುಮತ ಪಡೆಯುವುದಾಗಿ ಮಾವೋ ಪಕ್ಷ ತಿಳಿಸಿತ್ತು.
ಮಾವೋವಾದಿಗಳ ತೀವ್ರ ಒತ್ತಡಕ್ಕೆ ಮಣಿದ ಮಾಧವ್ ಕುಮಾರ್ ನೇಪಾಳ್ ಅವರು ಜೂನ್ ತಿಂಗಳಿನಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ನೂತನ ಪ್ರಧಾನಿ ಆಯ್ಕೆಗಾಗಿ ನಡೆದ ಐದು ಚುನಾವಣೆಯಲ್ಲೂ ಬಹುಮತದ ಬೆಂಬಲ ಪಡೆಯಲು ಪ್ರಚಂಡ, ಪೌಡ್ಯಾಲ್ ವಿಫಲರಾಗಿದ್ದರು. 599 ಸದಸ್ಯ ಬಲದ ಸಂಸತ್‌ನಲ್ಲಿ ಮಾವೋ ಪಕ್ಷ 236 ಸದಸ್ಯ ಬಲ ಹೊಂದಿದೆ. ಬಹುಮತ ಸಾಬೀತುಪಡಿಸಲು ಮಾವೋ ಪಕ್ಷಕ್ಕೆ 64 ಮತಗಳ ಅಗತ್ಯವಿದೆ. ಆದರೆ ಮಾವೋ ಪಕ್ಷಕ್ಕೆ 64 ಸಂಸದರ ಬೆಂಬಲ ದೊರೆಯದ ಕಾರಣ ಪ್ರಧಾನಿ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ.