ಹವಾಮಾನ ವೈಪರೀತ್ಯದಿಂದಾಗಿ ಲಘು ವಿಮಾನವೊಂದು ದುರಂತಕ್ಕೀಡಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನೇಪಾಳದ ಕಾಠ್ಮಂಡು ಸಮೀಪ ಸಂಭವಿಸಿದ್ದು, ವಿಮಾನದಲ್ಲಿದ್ದ ಆರು ಮಂದಿ ವಿದೇಶಿ ಪ್ರವಾಸಿಗರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ತನಿಖೆ ನಡೆಸಲು ಸರಕಾರ ಆದೇಶ ನೀಡಿದೆ.
ಅಗ್ನಿ ಎಂಬ ಲಘು ವಿಮಾನವೊಂದು ಇಂದು ಬೆಳಿಗ್ಗೆ ಲುಕ್ಲಾದಿಂದ ಬರುತ್ತಿದ್ದ ವೇಳೆ ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಕಾಠ್ಮಂಡುವಿನಿಂದ ಸುಮಾರು 24 ಕಿಲೋ ಮೀಟರ್ ದೂರದಲ್ಲಿನ ದುರ್ಗಮ ಪರ್ವತ ಪ್ರದೇಶದಲ್ಲಿ ದುರಂತಕ್ಕೀಡಾಗಿರುವುದಾಗಿ ಸಚಿವಾಲಯದ ವಕ್ತಾರ ಜಯಮುಕುಂದನ್ ಖಾನಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ರಕ್ಷಣಾ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಆದರೆ ಆ ಪ್ರದೇಶ ತುಂಬಾ ದುರ್ಗಮವಾಗಿದ್ದರಿಂದ ಅಲ್ಲಿಗೆ ತಲುಪಲು ವಿಳಂಬವಾಗಿತ್ತು ಎಂದು ಅವರು ವಿವರಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಮಿಲಿಟರಿ ಪಡೆ ತೆರಳಿದ್ದು, ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದ ಶವಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಲಘ ವಿಮಾನದಲ್ಲಿ 14 ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಅಮೆರಿಕ, ಬ್ರಿಟನ್ ಹಾಗೂ ಜಪಾನ್ ಪ್ರವಾಸಿಗರು ಸೇರಿದ್ದಾರೆ. ಶವಗಳನ್ನು ಸ್ಥಳೀಯರ ನೆರವಿನಿಂದ ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.