ಖ್ಯಾತ ಚಿತ್ರ ಕಲಾವಿದ ವಿನ್ಸೆಂಟ್ ವ್ಯಾನ್ ಗೋ ಅವರ ಅತ್ಯಮೂಲ್ಯ ಕಲಾಕೃತಿಯನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಈಜಿಪ್ಟ್‌ನ ಸಾಂಸ್ಕೃತಿಕ ಅಧಿಕಾರಿ ಸೇರಿದಂತೆ ಹಲವು ಉದ್ಯೋಗಿಗಳನ್ನು ಬಂಧಿಸಿರುವುದಾಗಿ ಈಜಿಪ್ಟ್ ಸಾಂಸ್ಕೃತಿಕ ಸಚಿವಾಲಯ ತಿಳಿಸಿದೆ.
ಕೈರೋದಲ್ಲಿನ ಮಹಮುದ್ ಖಲೀಲ್ ವಸ್ತುಸಂಗ್ರಹಾಲಯದಿಂದ ವ್ಯಾನ್ ಗೋನ ಕಲಾಕೃತಿಯನ್ನು ಕಳವು ಮಾಡಲಾಗಿತ್ತು. ಆ ನಿಟ್ಟಿನಲ್ಲಿ ಮೋಸೆನ್ ಶಾಲಾನ್ ಹಾಗೂ ವಸ್ತುಸಂಗ್ರಹಾಲಯದ ಮೂರು ಮಂದಿ ಭದ್ರತಾ ಸಿಬ್ಬಂದಿಗಳು, ಅಧಿಕಾರಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ.
ವ್ಯಾನ್ ಗೋ ಅವರ ಕಲಾಕೃತಿಯನ್ನು ಕೈರೋ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದು, ಕಳವು ಪ್ರಕರಣ ಸಂಬಂಧ ಇಬ್ಬರು ಇಟಲಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಈಜಿಪ್ಟ್ ಕಲ್ಚರಲ್ ಸಚಿವ ಫಾರೂಕ್ ಹೋಸ್ನಿ ತಿಳಿಸಿದ್ದಾರೆ. ಕಲಾಕೃತಿಯ ಮೌಲ್ಯ ಸುಮಾರು 50 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಕಳಪೆ ಭದ್ರತೆಯೇ ವ್ಯಾನ್ ಗೋ ಕಲಾಕೃತಿ ಕಳವಿಗೆ ಪ್ರಮುಖ ಕಾರಣ ಎಂದು ಈಜಿಪ್ಟ್‌ನ ಹಿರಿಯ ಪ್ರಾಸಿಕ್ಯೂಟರ್ ಅಬ್ದೆಲ್ ಮೆಗ್ಯುಡ್ ಮಹಮುದ್ ಆರೋಪಿಸಿದ್ದಾರೆ. ವಸ್ತುಸಂಗ್ರಹಾಲಯದಲ್ಲಿ 43 ಕ್ಯಾಮರಾಗಳನ್ನು ಹಾಗೂ ಅಲಾರಂ ಅಳವಡಿಸಲಾಗಿದೆ. ಆದರೂ ಕೆಲವು ಸಂದರ್ಭದಲ್ಲಿ ಕ್ಯಾಮರಾ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ವಿವರಿಸಿದ್ದಾರೆ.