ಇಲ್ಲಿನ ಹೋಟೆಲ್‌ವೊಂದರ ಮೇಲೆ ಇಸ್ಲಾಮಿಕ್ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ ಪರಿಣಾಮ ಆರು ಮಂದಿ ಸಂಸದರು ಸೇರಿದಂತೆ ಮೂವತ್ತು ಮಂದಿ ಬಲಿಯಾಗಿರುವುದಾಗಿ ಸೋಮಾಲಿಯಾ ಉಪ ಪ್ರಧಾನಿ ಮಂಗಳವಾರ ತಿಳಿಸಿದ್ದಾರೆ.
ಸರಕಾರಿ ಭದ್ರತಾ ಪಡೆಯನ್ನು ಬೇಧಿಸಿ ಹೋಟೆಲ್‌ನೊಳಕ್ಕೆ ನುಗ್ದಿದ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಹೋಟೆಲ್ ಮೋನಾದಲ್ಲಿ ಸಂಭವಿಸಿದ ದುರಂತದಲ್ಲಿ ಆರು ಮಂದಿ ಸೋಮಾಲಿಯಾದ ಸಂಸದರು, ನಾಲ್ಕು ಮಂದಿ ಅಧಿಕಾರಿಗಳು ಸೇರಿದಂತೆ ಮೂವತ್ತು ಮಂದಿ ಸಾವನ್ನಪ್ಪಿರುವುದಾಗಿ ಅಬ್ದಿರಾಮನ್ ಹಾಜಿ ಅದಾನ್ ಇಬ್ಬಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಭೀಕರ ಘಟನೆಯಲ್ಲಿ 20 ಮಂದಿ ಅಮಾಯಕ ನಾಗರಿಕರು ಸಾವನ್ನಪ್ಪಿದ್ದಾರೆ. ಹೋಟೆಲ್‌ನೊಳಕ್ಕೆ ಏಕಾಏಕಿ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಲ್ಲದೆ, ತಮ್ಮನ್ನು ತಾವೇ ಸ್ಫೋಟಿಸಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.