ಗುಪ್ತಚರ ಇಲಾಖೆಯ ಕಣ್ಗಾವಲು ಮತ್ತು ಅಸುರಕ್ಷಿತತೆಯ ದೃಷ್ಟಿಯಿಂದ ಅಲ್ ಖಾಯಿದಾ ಉಗ್ರಗಾಮಿಗಳ ಪಡೆ ಇದೀಗ ಬುಡಕಟ್ಟು ಪ್ರದೇಶದಿಂದ ಹೆಚ್ಚಿನ ಸುರಕ್ಷಿತ ತಾಣವಾಗಿರುವ ನಗರ ಪ್ರದೇಶಕ್ಕೆ ಬಹುತೇಕವಾಗಿ ಠಿಕಾಣಿ ಹೂಡಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಪ್ರಮುಖ ನಗರವಾಗಿರುವ ಕರಾಚಿ ಮೇಲೆ ಅಮೆರಿಕದ ಡ್ರೋನ್ಸ್ ದಾಳಿ ನಡೆಯುವುದಿಲ್ಲ ಎಂಬ ಬಲವಾದ ನಂಬಿಕೆ ಅಲ್ ಖಾಯಿದಾದ ಲೆಕ್ಕಚಾರವಾಗಿದೆ. ಅಫ್ಘಾನ್ ಮತ್ತು ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಠಿಕಾಣಿ ಹೂಡಿದ್ದ ಅಲ್ ಖಾಯಿದಾ, ಅಲ್ಲಿಂದಲೇ ಕಾರ್ಯಾಚರಿಸುತ್ತಿತ್ತು. ಆದರೆ ಬುಡಕಟ್ಟು ಪ್ರದೇಶ ಗುಪ್ತಚರ ಇಲಾಖೆಗೆ ಸುಲಭದಲ್ಲಿ ಉಗ್ರರ ಜಾಡು ಸಿಗುತ್ತಿರುವ ಹಿನ್ನೆಲೆ ಮತ್ತು ಅಸುರಕ್ಷಿತ ಸ್ಥಳವಾಗಿದ್ದರಿಂದ ಉಗ್ರರ ಸಣ್ಣ ಗುಂಪೊಂದು ನಗರ ಪ್ರದೇಶದಲ್ಲಿ ನೆಲೆಸಿರುವುದಾಗಿ ವಿದೇಶಿ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಟೈಮ್ಸ್ ವರದಿ ಮಾಡಿದೆ.
ಆ ನಿಟ್ಟಿನಲ್ಲಿ ಅಲ್ ಖಾಯಿದಾ ಉಗ್ರರ ಪಡೆ ಬಹುತೇಕವಾಗಿ ಕರಾಚಿಗೆ ತಮ್ಮ ನೆಲೆಯನ್ನು ವರ್ಗಾಯಿಸಿಕೊಂಡಿದ್ದು, ಅಲ್ಲಿಂದಲೇ ಕಾರ್ಯಾಚರಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಅಫ್ಘಾನಿಸ್ತಾನದ ವಾಯುವ್ಯ ಭಾಗದ ಬುಡಕಟ್ಟು ಪ್ರದೇಶದಲ್ಲಿ ಉಗ್ರರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ತೀವ್ರಗೊಂಡ ಪರಿಣಾಮ ಹೆಚ್ಚಿನ ಪಾಶ್ತುನ್ಸ್ ಜನಾಂಗದ ಜನರು ಕರಾಚಿಗೆ ವಲಸೆ ಬಂದು ನೆಲೆಸಿದ್ದಾರೆ. ಹಾಗಾಗಿ ಕರಾಚಿಯಲ್ಲಿ ನೆಲೆಸಿರುವ ಪಾಶ್ತುನ್ಸ್ ಜನರ ಮಧ್ಯೆಯೇ ತನ್ನ ನೆಲೆ ಸ್ಥಾಪಿಸಿದೆ ಎಂದು ವಿವರಿಸಿದೆ.