ನೆರೆಯ ಭಾರತದ ಜೊತೆ ಉತ್ತಮ ಸಂಬಂಧ ಹೊಂದಬೇಕೆಂಬ ಬಯಕೆ ಪಾಕಿಸ್ತಾನದ್ದಾಗಿದೆ. ಅಲ್ಲದೇ ಕಾಶ್ಮೀರ ಸೇರಿದಂತೆ ಬಾಕಿ ಉಳಿದ ಎಲ್ಲಾ ಸಮಸ್ಯೆಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಇರಾದೆ ತಮ್ಮದಾಗಿದೆ ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ಅಮೆರಿಕ ಸೆಂಟ್ರಲ್ ಕಮಾಂಡ್‌ನ ನೂತನ ವರಿಷ್ಠರಾಗಿ ಅಧಿಕಾರ ವಹಿಸಿಕೊಂಡ ಜನರಲ್ ಜೇಮ್ಸ್ ಮಾಟ್ಟಿಸ್ ಅವರು ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಗಿಲಾನಿ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಲ್ಲದೇ, ನೆರೆ ಸಂತ್ರಸ್ತ ಪಾಕಿಸ್ತಾನಿಯರಿಗೆ ಹೆಚ್ಚಿನ ನೆರವು ನೀಡುವ ನಿಟ್ಟಿನಲ್ಲಿ ಅಮೆರಿಕ ತನ್ನ ಬೆಂಬಲವನ್ನು ಮುಂದುವರಿಸಲಿದೆ ಎಂದು ಭರವಸೆ ನೀಡಿರುವ ಜೇಮ್ಸ್, ಅಫ್ಘಾನಿಸ್ತಾನದಲ್ಲಿ ಅಮೆರಿಕ ಮಿಲಿಟರಿ ಪಡೆ ಹೋರಾಟದ ಬಗ್ಗೆ ಪಾಕಿಸ್ತಾನ ಹೆಚ್ಚಿನ ನೆರವು ನೀಡಬೇಕೆಂದು ಹೇಳಿದರು.
ಅದೇ ರೀತಿ ನೆರೆಯ ಭಾರತ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಕಾಶ್ಮೀರ ಸೇರಿದಂತೆ ಎಲ್ಲಾ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಗಿಲಾನಿ ವಿಶ್ವಾಸವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ಕಚೇರಿಯಿಂದ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.