ಇರಾಕ್‌ನ ಸ್ಥಳೀಯ ಸರಕಾರ ಮತ್ತು ಪೊಲೀಸ್ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಹತ್ತಕ್ಕೂ ಹೆಚ್ಚು ಕಡೆ ನಡೆಸಲಾದ ಬಾಂಬ್ ದಾಳಿಯಲ್ಲಿ ಕನಿಷ್ಠ 43 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯ ಹೊಣೆಗಾರಿಕೆಯನ್ನು ಇದುವರೆಗೆ ಯಾರೂ ಹೊತ್ತುಕೊಂಡಿಲ್ಲ. ಆದರೆ ಅಮೆರಿಕಾ ಪಡೆಗಳ ಸಂಖ್ಯೆಯನ್ನು 50,000ಕ್ಕೆ ಇಳಿಕೆಗೊಳಿಸಿದ ಮರುದಿನವೇ ಇಂತಹ ದಾಳಿಗಳು ರಾಷ್ಟ್ರದಾದ್ಯಂತ ನಡೆದಿದೆ ಎಂದು ವರದಿಗಳು ಹೇಳಿವೆ.
ಬಾಗ್ದಾದ್ ಉತ್ತರದಲ್ಲಿನ ಪೊಲೀಸ್ ಠಾಣೆಯ ಹಿಂಬದಿಯಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರ್ ಬಾಂಬ್ ಸ್ಫೋಟಗೊಂಡಿತ್ತು. ಇದರಲ್ಲಿ ಆರು ಪೊಲೀಸರು ಸೇರಿದಂತೆ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ. 58ಕ್ಕೂ ಹೆಚ್ಚು ಮಂದಿ ಸ್ಫೋಟದಿಂದ ಗಾಯಗೊಂಡಿದ್ದಾರೆ, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಉತ್ತರ ಇರಾಕ್‌ನ ಕಿರ್ಕಕ್ ನಗರದಿಂದ ಮುಸ್ಲಿಮರ ಪವಿತ್ರ ನಗರ ಕರ್ಬಾಲಾದವರೆಗೆ ನಡೆದಿರುವ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಐವರು ಪೊಲೀಸರು ಮತ್ತು ಓರ್ವ ನಾಗರಿಕ ಘಟನೆಗೆ ಬಲಿಯಾಗಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಆತ್ಮಹತ್ಯಾ ಬಾಂಬರ್ ಓರ್ವ ತಾನಿದ್ದ ಕಾರನ್ನು ಸ್ಫೋಟಗೊಳಿಸಿದ್ದರಿಂದ ಘಟನೆ ಸಂಭವಿಸಿತ್ತು.
ಅದೇ ರೀತಿ ರಾಜಧಾನಿಯ ಉತ್ತರದಲ್ಲಿನ ಮುಕ್ದಾದಿಯಾಹ್, ಫಾಲುಜಾಹ್, ಇಸ್ಕಾಂದರಿಯಾಹ್, ಬಸ್ರಾ ಮುಂತಾದ ನಗರಗಳಲ್ಲಿಯೂ ಬಾಂಬ್ ಸ್ಫೋಟಗಳು ನಡೆದಿವೆ. ಇಲ್ಲೂ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ.