ಡರ್ಮ್‌ಸ್ಟಾಡ್, ಗುರುವಾರ, 26 ಆಗಸ್ಟ್ 2010( 18:51 IST )
ತನ್ನ ಮಾಜಿ ಸ್ನೇಹಿತನಿಗೆ ಸೋಂಕನ್ನು ಹರಡಿಸಿದ್ದ ಎಚ್ಐವಿ ಪಾಸಿಟಿವ್ ಪಾಪ್ ಸ್ಟಾರ್ ಜೈಲು ವಾಸ ತಪ್ಪಿಸಿಕೊಂಡಿದ್ದಾಳೆ. ಈ ಕುರಿತು ಇಂದು ತೀರ್ಪು ನೀಡಿರುವ ಜರ್ಮನಿ ನ್ಯಾಯಾಲಯವೊಂದು ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳ ಮನವಿ ಮೇರೆಗೆ ಜೈಲು ಶಿಕ್ಷೆ ವಿಧಿಸದೇ ಇರಲು ನಿರ್ಧರಿಸಿತು.
'ನೋ ಎಂಜಲ್ಸ್' ಹುಡುಗಿಯರ ಗುಂಪಿನ ಸದಸ್ಯೆ 28ರ ಹರೆಯದ ನದ್ಜಾ ಬೆನೈಸಾ ಎಂಬಾಕೆ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಪಶ್ಚಿಮ ಜರ್ಮನಿಯ ಡರ್ಮ್‌ಸ್ಟಾಡ್ ನ್ಯಾಯಾಲಯವೊಂದು ಇತ್ತೀಚೆಗಷ್ಟೇ ತೀರ್ಪು ನೀಡಿತ್ತು. ಕಾನೂನುಗಳನ್ನು ಉಲ್ಲಂಘಿಸಿದ ಒಂದು ಆರೋಪ ಮತ್ತು ಉಲ್ಲಂಘನೆ ಯತ್ನದ ಎರಡು ಆರೋಪಗಳಲ್ಲಿ ಬೆನೈಸಾ ದೋಷಿ ಎಂದು ನ್ಯಾಯಾಲಯ ತಿಳಿಸಿತ್ತು.
ತಾನು ಅಸುರಕ್ಷಿತ ಲೈಂಗಿಕ ಚಟುವಟಿಕೆ ನಡೆಸಿದ್ದೆ ಮತ್ತು ತನಗೆ ಸೋಂಕು ಇರುವುದನ್ನು ಮುಚ್ಚಿಟ್ಟಿದ್ದೆ ಎಂಬುದನ್ನು ಈ ಪಾಪ್ ಸಿಂಗರ್ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಳು. ಆದರೆ ಇದನ್ನು ತಾನು ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ತೊಂದರೆಯಾಗಬೇಕು ಎಂಬ ನಿಟ್ಟಿನಲ್ಲಿ ನಾನು ಮಾಡಿಲ್ಲ ಎಂದು ವಿಚಾರಣೆಯಲ್ಲಿ ಸ್ಪಷ್ಟಪಡಿಸಿದ್ದಳು.
ವಿಚಾರಣೆ ಸಂದರ್ಭದಲ್ಲಿ ತೀರಾ ಕುಗ್ಗಿ ಹೋಗಿದ್ದ ಪಾಪ್ ಸಿಂಗರ್, ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿದ್ದರು. ಹೃದಯಾಂತರಾಳದಿಂದ ನಾನು ತಪ್ಪಿಗಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಸಾಮಾನ್ಯ ಜೀವನಕ್ಕೆ ಮರಳಲು ನನಗೂ ಬಯಕೆಯಿದೆ, ಆದರೆ ಅದು ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದರು.
ಆಕೆಯ ಮೇಲಿದ್ದ ಆರೋಪಗಳು ಸಾಬೀತುಗೊಂಡಿರುವುದರಿಂದ 10 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬೇಕಿತ್ತು. ಆದರೆ ಪ್ರಾಸಿಕ್ಯೂಷನ್ ಮತ್ತು ಡಿಫೆನ್ಸ್ ವಕೀಲರುಗಳು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೇಳಿಕೊಂಡಿದ್ದರು. ತನ್ನ ತಪ್ಪನ್ನು ಒಪ್ಪಿಕೊಂಡು, ಕ್ಷಮೆ ಕೇಳಿರುವುದರಿಂದ ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದರು.