ಪಾಕಿಸ್ತಾನದ ಇತಿಹಾಸದಲ್ಲಿಯೇ ಕಾಣದ ಭಾರೀ ಪ್ರವಾಹಕ್ಕೆ ಸುಮಾರು 3.5 ಮಿಲಿಯನ್‌ಕ್ಕಿಂತಲೂ ಹೆಚ್ಚಿನ ನೆರೆ ಸಂತ್ರಸ್ತರು ಕುಡಿಯಲು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ. ಅಲ್ಲದೇ ಕೊಳಕು ನೀರಿನಿಂದಾಗಿ ಖಾಯಿಲೆಗಳು ಹೆಚ್ಚುವ ಸಂಭವ ದಟ್ಟವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಕಳೆದ ತಿಂಗಳು ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 20ಮಿಲಿಯನ್‌ಗಿಂತಲೂ ಹೆಚ್ಚು ಜನರು ತೊಂದರೆ ಒಳಗಾಗಿದ್ದರು. ಆದರೆ ಸರಕಾರ ಅಂತಾರಾಷ್ಟ್ರೀಯ ಹಣಕಾಸಿನ ನೆರವಿನಿಂದ ಅರ್ಧದಷ್ಟು ಜನರಿಗೆ ಮಾತ್ರ ಅನುಕೂಲತೆ ಕಲ್ಪಿಸಿಕೊಟ್ಟಿದೆ.
ಪ್ರತಿ ದಿನ ಒಬ್ಬ ವ್ಯಕ್ತಿಗೆ ಐದು ಲೀಟರ್ ಶುದ್ದ ನೀರಿನ ಅಗತ್ಯವಿದೆ ಎಂದಿರುವ ವಿಶ್ವಸಂಸ್ಥೆ, ಪ್ರವಾಹದಿಂದಾಗಿ ಶುದ್ಧ ನೀರು ಕೂಡ ದೊರೆಯಂತಹ ಸ್ಥಿತಿ ಏರ್ಪಟ್ಟಿರುವುದರಿಂದ ನೆರೆ ಸಂತ್ರಸ್ತರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀಳುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ನೆರೆ ಸಂತ್ರಸ್ತರ ಬವಣೆ ನೀಗಿಸಲು ನಾವು ಶೀಘ್ರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ ಇದು ಸಾಕಾಗುತ್ತಿಲ್ಲ ಎಂದು ಪಾಕಿಸ್ತಾನದಲ್ಲಿನ ಯುನಿಸೆಫ್ ಪ್ರತಿನಿಧಿ ಕರೇನ್ ಅಲ್ಲೆನ್ ತಿಳಿಸಿದ್ದಾರೆ.