ವ್ಯಾಟಿಕನ್ ಸಿಟಿ, ಶುಕ್ರವಾರ, 27 ಆಗಸ್ಟ್ 2010( 15:06 IST )
ಪಾಕಿಸ್ತಾನದಲ್ಲಿನ ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ತಾರತಮ್ಯ ಎಸಗಲಾಗಿದೆ ಎಂದು ವ್ಯಾಟಿಕನ್ ಮಿಷನರ್ ಮಂಡಳಿಯ ನ್ಯೂಸ್ ಏಜೆನ್ಸಿ ಆರೋಪಿಸಿದೆ.
ನೆರೆ ಸಂತ್ರಸ್ತರಿಗಾಗಿ ಪರಿಹಾರ ನೀಡತ್ತಿರುವ ಮುಸ್ಲಿಮ್ ಸಂಘಟನೆ ಅಥವಾ ಸರಕಾರಿ ಅಧಿಕಾರಿಗಳು ಇಸ್ಲಾಮಿಕ್ ಮೂಲಭೂತವಾದಿಗಳೊಂದಿಗೆ ಕೈಜೋಡಿಸಿರುವುದಾಗಿ ನ್ಯೂಸ್ ಏಜೆನ್ಸಿ ತಿಳಿಸಿದೆ. ನೆರೆ ಸಂತ್ರಸ್ತರಲ್ಲಿ ಕ್ರಿಶ್ಚಿಯನ್ ಮತ್ತು ಇನ್ನಿತರ ಅಲ್ಪಸಂಖ್ಯಾತ ಸಮುದಾಯದವರಿಗೆ ತಾರತಮ್ಯ ಎಸಗಲಾಗಿದೆ ಎಂದು ದೂರಿದೆ.
ಪಂಜಾಬ್ ಪ್ರಾಂತ್ಯದಲ್ಲಿ 2 ಲಕ್ಷ ಕ್ರಿಶ್ಚಿಯನ್ ನೆರೆ ಸಂತ್ರಸ್ತರು, ಸಿಂಧ್ ಪ್ರಾಂತ್ಯದಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂಗಳು ಸೇರಿ ಆರು ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆ ನಿಟ್ಟಿನಲ್ಲಿ ಪಾಕಿಸ್ತಾನದ ಅಧಿಕಾರಿಗಳು ಕ್ರಿಶ್ಚಿಯನ್ ನೆರೆ ಸಂತ್ರಸ್ತರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ. ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ನೆರೆ ಸಂತ್ರಸ್ತರ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿಕೊಂಡಿಲ್ಲ. ನೆರೆ ಸಂತ್ರಸ್ತರಿಗೆ ನೀಡಬೇಕಾದ ಆಹಾರ, ಆರೋಗ್ಯ ಸೌಲಭ್ಯ ನೀಡದೆ ಕ್ರಿಶ್ಚಿಯನ್ ಸಮುದಾಯದವರ ಹೆಸರನ್ನು ಕೈಬಿಟ್ಟಿರುವುದಾಗಿ ವರದಿ ಹೇಳಿದೆ.