ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅಮೆರಿಕ ಸಿಐಎ ಏಜೆಂಟ್ ಎಂದು ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಆರೋಪಿಸಿದ್ದು, ಜಗತ್ತಿನಾದ್ಯಂತ ಭಯಭೀತ ವಾತಾವರಣ ಸೃಷ್ಟಿಸಲು ಅಮೆರಿಕದ ಜಾರ್ಜ್ ಡಬ್ಲ್ಯು ಬುಶ್ ತನ್ನ ಆಡಳಿತಾವಧಿಯಲ್ಲಿ ಒಸಾಮಾನನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿರುವುದು ದಾಖಲೆಗಳಿಂದ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಲಾಡೆನ್‌ನನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಜಗತ್ತಿನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿತ್ತು ಎಂದು ಕ್ಯಾಸ್ಟ್ರೋ ಮಾಧ್ಯಮವೊಂದರ ಜತೆ ಮಾತನಾಡುತ್ತ ದೂರಿದ್ದಾರೆ. ಬುಷ್ ಯಾವತ್ತಿಗೂ ಲಾಡೆನ್‌ನ ಬೆಂಬಲವನ್ನು ಕಡೆಗಣಿಸಿಲ್ಲ, ಯಾಕೆಂದರೆ ಲಾಡೆನ್ ಬುಷನ್‌ನ ಅಧೀನವಾಗಿಯೇ ಇದ್ದ.
ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ಸಮರದ ಕುರಿತಂತೆ ಸಾವಿರಾರು ಪುಟಗಳಷ್ಟು ದಾಖಲೆಗಳು ವಿಕಿಲೀಕ್ಸ್.ಆರ್ಗ್ ವೆಬ್‌ಸೈಟ್‌ನಲ್ಲಿ ಬಹಿರಂಗಗೊಳಿಸಿತ್ತು. ಇದರಲ್ಲಿ ಒಸಾಮಾ ಬಿನ್ ಲಾಡೆನ್ ಸಿಐಎ ಏಜೆಂಟ್ ಎಂಬುದು ಸಾಬೀತಾಗಿದೆ ಎಂದು ಕ್ಯಾಸ್ಟ್ರೋ ಗಂಭೀರವಾಗಿ ಆರೋಪಿಸಿದ್ದಾರೆ. ಆದರೆ ಆ ಬಗ್ಗೆ ಹೆಚ್ಚಿನ ವಿವರಣೆ ನೀಡಿಲ್ಲ.
ಅಮೆರಿಕದ ಸಾಮ್ರಾಜ್ಯಶಾಹಿ ನೀತಿ ವಿರುದ್ಧ 84ರ ಹರೆಯದ ಕ್ರಾಂತಿಕಾರಿ ಕ್ಯಾಸ್ಟ್ರೋ ಅವರ ಹೇಳಿಕೆಯನ್ನು ಕಮ್ಯೂನಿಷ್ಟ್ ಪಕ್ಷದ ದೈನಿಕ ಗ್ರಾನ್ಮಾ ಪ್ರಕಟಿಸಿದೆ.