ಪಾಕಿಸ್ತಾನದಲ್ಲಿ ಪ್ರಮುಖ ಮನೋರಂಜನಾ ಚಾನೆಲ್‌ಗಳಾದ ಸ್ಟಾರ್ ಮತ್ತು ಸೋನಿ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಚಾನೆಲ್‌ಗಳಾದ ಬಿಬಿಸಿ, ಸಿಎನ್ಎನ್ ಪ್ರಸಾರಕ್ಕೆ ಕೇಬಲ್ ನೆಟ್‌ವರ್ಕ್ಸ್ ಸಂಪರ್ಕವನ್ನು ದೇಶಾದ್ಯಂತ ಕಡಿತಗೊಳಿಸಿದೆ.
ಹಾಗಾಗಿ ಇದೀಗ ಇಸ್ಲಾಮಾಬಾದ್‌ನಲ್ಲಿನ ನಾಯಾತಾಲ್ ಕೇಬಲ್ ನೆಟ್‌ವರ್ಕ್, ಪಾಕಿಸ್ತಾನ್ ವಿದ್ಯುನ್ಮಾನ ಮಾಧ್ಯಮ ನಿಯಂತ್ರಕ ಮಂಡಳಿ ಕೆಲವು ಚಾನೆಲ್‌ಗಳನ್ನು ರದ್ದುಪಡಿಸಿದೆ ಎಂಬ ಸಂದೇಶವನ್ನು ಟಿವಿಯಲ್ಲಿ ತೋರಿಸುತ್ತಿದೆ.
ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯನ್ನು ಕೂಡ ನೀಡಿಲ್ಲ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಭಾರತೀಯ ಮನೋರಂಜನಾ ಚಾನೆಲ್‌ಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಿಇಎಂಆರ್ಎ ಅಧ್ಯಕ್ಷ ಮಲಿಕ್ ಮುಶ್ತಾಕ್ ತಿಳಿಸಿದ್ದಾರೆ. ಆ ನೆಲೆಯಲ್ಲಿ ಪಾಕಿಸ್ತಾನದಲ್ಲಿ ಪ್ರಸಾರ ಮಾಡಲು ಅವಕಾಶ ಇಲ್ಲದ ಚಾನೆಲ್‌ಗಳ ಪ್ರಸಾರ ಕೂಡಲೇ ನಿಲ್ಲಿಸಬೇಕೆಂದು ಕೇಬಲ್ ಆಪರೇಟರ್‌ಗಲಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಚಾನೆಲ್‌ಗಳ ಪ್ರಸಾರವನ್ನು ರದ್ದುಗೊಳಿಸಬೇಕೆಂದು ಆಗೋಸ್ಟ್ 25ರಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಶಿಫಾರಸು ಮಾಡಿದ್ದು, ಇದರ ಆಧಾರದ ಮೇಲೆ ಸುಪ್ರೀಂಕೋರ್ಟ್ ಈ ಆದೇಶ ನೀಡಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.
ಇದೀಗ ಪಾಕಿಸ್ತಾನದಲ್ಲಿ ಸ್ಟಾರ್ ಪ್ಲಸ್, ಸೋನಿ, ಸೆಟ್ ಮ್ಯಾಕ್ಸ್, ಸ್ಟಾರ್ ಗೋಲ್ಡ್, ಜೀ ಟಿವಿ, ಜೀ ಮೂವಿಸ್, ಸ್ಟಾರ್ ಸ್ಪೋರ್ಟ್ಸ್, ಇಎಸ್‌ಪಿಎನ್, ಸೂಪರ್ ಸ್ಫೋರ್ಟ್ಸ್, ಸಿಎನ್ಎನ್, ಬಿಬಿಸಿ, ಅಲ್ ಜಾಜೀರಾ ಸೇರಿದಂತೆ ಸುಮಾರು 30 ಚಾನೆಲ್‌ಗಳ ಪ್ರಸಾರವನ್ನು ಕಡಿತಗೊಳಿಸಲಾಗಿದೆ ಎಂದು ಪಾಕಿಸ್ತಾನ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಅಧಿಕಾರಿ ಮುಹಮ್ಮದ್ ಸಾದಿಕ್ ತಿಳಿಸಿದ್ದಾರೆ.