ಮೈನಿಂಗ್ ಕಾರ್ಯವನ್ನು ಮುಂದುವರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಚೀನಾ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ಟಿಬೆಟಿಯನ್‌ರು ಸಾವನ್ನಪ್ಪಿದ್ದು, ಸುಮಾರು 30 ಜನರು ಗಾಯಗೊಂಡಿರುವುದಾಗಿ ವರದಿಯೊಂದು ತಿಳಿಸಿದೆ.
ಚೀನಾದ ವಾಯುವ್ಯ ಭಾಗದ ಸಿಯಾಚಿನ್ ಪ್ರಾಂತ್ಯದಲ್ಲಿ ಆಗೋಸ್ಟ್ 17ರಂದು ಚೀನಾದ ಅಧಿಕಾರಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಟಿಬೆಟ್ ಸಮುದಾಯದ ಮೇಲೆ ಈ ಗುಂಡಿನ ದಾಳಿ ನಡೆಸಿರುವುದಾಗಿ ಅಮೆರಿಕ ಮೂಲದ ರೇಡಿಯೋ ಫ್ರೀ ಏಶ್ಯಾ ಹೇಳಿದೆ.
ಗಡಿಪಾರುಗೊಂಡ ಟಿಬೆಟಿಯನ್‌ರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಗಣಿಗಾರಿಕೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಟಿಬೆಟಿಯನ್‌ರು ಪಾಲ್‌ಯೂಲ್ ಕೌಂಟಿ ಸರಕಾರದ ಕೇಂದ್ರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಚೀನಾ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು.
ಆದರೆ ಚೀನಾ ಪೊಲೀಸರ ಗುಂಡಿಗೆ ಟಿಬೆಟಿಯನ್‌ರು ಬಲಿಯಾಗಿದ್ದಾರೆ ಎಂಬ ಆರೋಪವನ್ನು ಕೌಂಟಿ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಪ್ರತಿಭಟನಾಕಾರರನ್ನು ಬಂಧಿಸಲಾಗಿದೆಯೇ ವಿನಃ ಗುಂಡಿಕ್ಕಿ ಹತ್ಯೆಗೈದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.