ಲಾಸ್ ವೇಗಾಸ್‌ನಲ್ಲಿ ಸಾಗುತ್ತಿದ್ದ ಕಾರನ್ನು ಶುಕ್ರವಾರ ತಡರಾತ್ರಿ ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಕೊಕೇನ್ ಮಾದಕದ್ರವ್ಯ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜನಪ್ರಿಯ ಮಾಡೆಲ್ ಪ್ಯಾರಿಸ್ ಹಿಲ್ಟನ್ ಅವರನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ.
ಕೊಕೇನ್ ಹೊಂದಿದ ಆರೋಪದ ಮೇಲೆ ಹಿಲ್ಟನ್ ಅವರನ್ನು ಶನಿವಾರ ಬೆಳಿಗ್ಗೆ ಕ್ಲಾರ್ಕ್ ಕೌಂಟಿ ಜೈಲಿನಲ್ಲಿ ಇಡಲಾಗಿದೆ ಎಂದು ಅವರ ಸಾರ್ವಜನಿಕ ಅಧಿಕಾರಿ ಮಾರ್ಕಸ್ ಮಾರ್ಟಿನ್ ತಿಳಿಸಿದ್ದಾರೆ.
ಹಿಲ್ಟನ್ ಅವರ ಆಪ್ತರೊಬ್ಬರು ಚಲಾಯಿಸುತ್ತಿದ್ದ ಕಾರಿನಿಂದ ಮರಿಜುವಾನಾ ಹೊಗೆ ಹೊರಗೆ ಬರುತ್ತಿದೆ ಎಂದು ಅಧಿಕಾರಿಗಳು ಕಾರನ್ನು ತಡೆದು ನಿಲ್ಲಿಸಿದ್ದರು. ಆಗ ಈ ಮಾದಕ ದ್ರವ್ಯ ಹಿಲ್ಟನ್ ಅವರಲ್ಲಿರುವುದು ಅಧಿಕಾರಿಗಳಿಗೆ ತಿಳಿದು ಬಂದಿತ್ತು ಮತ್ತು ಪರೀಕ್ಷೆಗಳ ಪ್ರಕಾರ ಅದು ಕೊಕೈನ್ ಎಂಬುದನ್ನೂ ಕಂಡುಕೊಂಡು ಬಂಧಿಸಿದರು ಎಂದು ವರದಿಗಳು ಹೇಳಿವೆ.
ಹಿಲ್ಟನ್ ಅವರಲ್ಲಿ ಎಷ್ಟು ಪ್ರಮಾಣದ ಡ್ರಗ್ ಇತ್ತೆಂದು ಬಹಿರಂಗವಾಗಿಲ್ಲ. ಆದರೆ ಮಧ್ಯರಾತ್ರಿ ಬಂಧಿಸಿರುವುದು ಹೌದು, ಆಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವರ್ಷದ ಜುಲೈ ತಿಂಗಳಲ್ಲಿ ಹಿಲ್ಟನ್ ಅವರನ್ನು ದಕ್ಷಿಣ ಆಫ್ರಿಕಾ ಪೊಲೀಸರು ಕೂಡ ಬಂಧಿಸಿದ್ದರು. ಅವರು ಮರಿಜುವಾನಾ ಸೇವಿಸುತ್ತಿದ್ದರು ಎಂಬ ಶಂಕೆಯ ಮೇಲೆ ವಶಕ್ಕೆ ತೆಗೆದುಕೊಳ್ಳಲಾಗಿತ್ತಾದರೂ, ನಂತರ ಆರೋಪ ರಹಿತವಾಗಿ ಬಿಡುಗಡೆ ಮಾಡಲಾಗಿತ್ತು.
2007ರಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸಿದ್ದಕ್ಕೂ ಅವರು ಜೈಲು ಶಿಕ್ಷೆ ಅನುಭವಿಸಿದ್ದರು.