ನೇಪಾಳದಲ್ಲಿನ ಸುಮಾರು 240 ವರ್ಷಗಳ ಕಾಲದ ರಾಜಪ್ರಭುತ್ವವನ್ನು ಸತತ ಹತ್ತು ವರ್ಷಗಳ ಕಾಲ ಶಸ್ತ್ರಾಸ್ತ್ರ ಹೋರಾಡುವ ಮೂಲಕ ಮಾವೋವಾದಿಗಳು ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಿದ್ದರು. ಆದರೆ ಇದೀಗ ಮತ್ತೆ ರಾಜಪ್ರಭುತ್ವ ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಮಾವೋಗಳು ಯತ್ನಿಸುತ್ತಿದ್ದಾರೆಂದು ಮಾಧವ್ ಕುಮಾರ್ ನೇಪಾಳ್ ತಿಳಿಸಿದ್ದಾರೆ.
'ನೇಪಾಳದ ನೆಲದಲ್ಲಿ ಮಾವೋವಾದಿಗಳು ಮತ್ತೆ ರಾಜಪ್ರಭುತ್ವ ಸ್ಥಾಪಿಸುವ ವಾಸನೆ ಬಡಿಯುತ್ತಿರುವುದಾಗಿ' ನೇಪಾಳ್ ಕಾಠ್ಮಂಡುವಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಯುಸಿಪಿಎನ್ ಮಾವೋವಾದಿ ವರಿಷ್ಠ ಪ್ರಚಂಡ ಅವರು ನೇಪಾಳದಲ್ಲಿ ಮತ್ತೆ ರಾಜಪ್ರಭುತ್ವ ಸ್ಥಾಪಿಸುವ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ ಎಂದು ರಾಯಲಿಸ್ಟ್ ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿಯ ಅಧ್ಯಕ್ಷ ಕಮಲ್ ಥಾಪಾ ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಮಾಧವ್ ಕುಮಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದಲ್ಲಿ ರಾಜಪ್ರಭುತ್ವ ಅಂತ್ಯಗೊಂಡ ನಂತರ ವಿದೇಶಗಳು ಮೂಗು ತೂರಿಸುತ್ತಿರುವುದಾಗಿ ಪ್ರಚಂಡ ಅವರು ಮಾತುಕತೆ ವೇಳೆಯಲ್ಲಿ ತಿಳಿಸಿರುವುದಾಗಿ ಥಾಪಾ ಹೇಳಿದ್ದರು. ಹಾಗಾಗಿ ನೇಪಾಳದಲ್ಲಿ ಮತ್ತೆ ರಾಜಪ್ರಭುತ್ವ ಸ್ಥಾಪನೆ ಮಾಡುವುದೇ ಹೆಚ್ಚು ಸೂಕ್ತವಾದದ್ದು ಎಂದು ಪ್ರಚಂಡ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿಯೂ ಥಾಪಾ ಯಾವುದೇ ದೇಶದ ಹೆಸರು ಹೇಳದೆ ವಿವರಿಸಿದ್ದರು.