ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಏಳು ಮಂದಿಯ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ಸೋಮವಾರ ಲಷ್ಕರ್ ಇ ತೊಯ್ಬಾದ ಕಮಾಂಡರ್ ಜಾಕಿರ್ ರೆಹಮಾನ್ ಲಖ್ವಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾವಲ್ಪಿಂಡಿ ಮೂಲದ ಭಯೋತ್ಪಾದನಾ ನಿಗ್ರಹ ಕೋರ್ಟ್ ನ್ಯಾಯಮೂರ್ತಿ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್ ಸೂಕ್ತವಾದ ಕಾರಣದಿಂದ ಕೂಡಿಲ್ಲ ಎಂಬ ನೆಲೆಯಲ್ಲಿ ಲಖ್ವಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದ ವಿಚಾರಣೆ ತುಂಬಾ ನಿಧಾನಗತಿಯಲ್ಲಿ ನಡೆಯುತ್ತಿರುವುದಾಗಿ ಲಖ್ವಿ ವಕೀಲ ಖ್ವಾಜಾ ಸುಲ್ತಾನ್ ಪಿಟಿಐ ಜೊತೆ ಮಾತನಾಡುತ್ತ ದೂರಿದ್ದು, ತನ್ನ ಕಕ್ಷಿದಾರ ಜಾಮೀನಿಗಾಗಿ ಲಾಹೋರ್ ಹೈಕೋರ್ಟ್ ಮೆಟ್ಟಿಲೇರಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಪೂರ್ಣಪ್ರಮಾಣದ ಆದೇಶ ಹೊರಬಿದ್ದ ನಂತರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದರು. 2008ರ ಮುಂಬೈ ದಾಳಿ ಪ್ರಕರಣ ಕುರಿತಂತೆ ಪ್ರಾಸಿಕ್ಯೂಷನ್ ಲಖ್ವಿ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲವಾಗಿದೆ. ಆದರೆ ನ್ಯಾಯಾಲಯ ಲಖ್ವಿಗೆ ಜಾಮೀನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಮುಂಬೈ ದಾಳಿಯ ಸಂದರ್ಭದಲ್ಲಿ ಸೆರೆಸಿಕ್ಕ ಏಕೈಕ ಉಗ್ರ ಅಮಿರ್ ಅಜ್ಮಲ್ ಕಸಬ್‌ನ ತಪ್ಪೊಪ್ಪಿಗೆ ಹೇಳಿಕೆಯಿಂದ ಮಾತ್ರ ಪ್ರಾಸಿಕ್ಯೂಷನ್ ಲಖ್ವಿ ವಿರುದ್ಧ ಪ್ರಕರಣದ ವಿಚಾರಣೆ ನಡೆಸುತ್ತಿದೆ ಎಂದು ಸುಲ್ತಾನ್ ವಿವರಿಸಿದ್ದಾರೆ.
ಏತನ್ಮಧ್ಯೆ, ಲಖ್ವಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರವಿದೆ. ಆ ನೆಲೆಯಲ್ಲಿ ಲಖ್ವಿಗೆ ಜಾಮೀನು ನೀಡಬಾರದು ಎಂದು ಸರಕಾರಿ ಪರ ವಕೀಲರು ತಿಳಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರ ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿದರು.