ಇರಾನ್ ನ್ಯಾಯಾಲಯವು ವ್ಯಭಿಚಾರಕ್ಕಾಗಿ ಮಹಿಳೆಯೊಬ್ಬಳಿಗೆ ಕಲ್ಲೆಸೆತದ ಶಿಕ್ಷೆ ಪ್ರಕಟಿಸಿರುವುದನ್ನು ಟೀಕಿಸಿದ್ದ ಫ್ರಾನ್ಸ್ ಮೊದಲ ಮಹಿಳೆ ಕಾರ್ಲಾ ಬ್ರೂನಿ ಸರ್ಕೋಜಿಯವರನ್ನು ಟೆಹ್ರಾನ್ 'ವೇಶ್ಯೆ' ಮತ್ತು 'ದಾಂಪತ್ಯ ಭಂಜಕಿ' ಎಂದು ಮೂಲಭೂತವಾದಿಗಳು ಜರೆಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಗಂಡನಿಗೆ ಮೋಸ ಮಾಡಿದ್ದಲ್ಲದೆ, ಆತನನ್ನು ಕೊಲ್ಲಲು ಸಹಕಾರ ನೀಡಿದ ಪ್ರಕರಣದಲ್ಲಿ ದೋಷಿಯೆಂದು ತೀರ್ಪು ಪಡೆದುಕೊಂಡಿರುವ ಸಕಿನೇಹ್ ಮೊಹಮ್ಮದಿ ಅಸ್ತಿಯಾನಿ ಎಂಬಾಕೆಯನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅಭಿಯಾನಕ್ಕೆ ಸಹಿ ಹಾಕಿದ್ದ 42ರ ಹರೆಯದ ಇಟಲಿ ಸೂಪರ್ ಮಾಡೆಲ್ ವಿರುದ್ಧ ಇರಾನ್ ಮಾಧ್ಯಮಗಳು ಕಿಡಿ ಕಾರಿವೆ.
ಇರಾನ್‌ನ ಕ್ರೂರ ಇಸ್ಲಾಮಿಕ್ ಆಡಳಿತದ ಮುಖವಾಣಿಯಾಗಿರುವ 'ಕಾಯ್ಹಾನ್' ಎಂಬ ಸ್ಥಳೀಯ ಭಾಷೆಯ ದಿನಪತ್ರಿಕೆಯು ಬ್ರೂನಿಯವರನ್ನು ಆಷಾಢಭೂತಿ ಎಂದು ಟೀಕಿಸಿದೆ.
ಈ ಸಂಬಂಧ ಸಂಪಾದಕೀಯ ಬರೆದಿರುವ ಪತ್ರಿಕೆಯು, ಬ್ರೂನಿಯವರು ಹಲವು ಮಂದಿ ಸೆಲೆಬ್ರಿಟಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಮಹಿಳೆಯೆಂದು ಬರೆದಿದೆ. ಫ್ರೆಂಚ್ ವೇಶ್ಯೆಯರು ಮಾನವ ಹಕ್ಕು ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ ಎಂಬ ಶೀರ್ಷಿಕೆಯಡಿಯಲ್ಲಿ ಇದನ್ನು ಪ್ರಕಟಿಸಲಾಗಿದೆ.
ಫ್ರೆಂಚ್ ಸಿಂಗರ್ ಬೆಂಜಮಿನ್ ಬಿಯೋಲೇ ಜತೆ ಸಂಬಂಧ ಹೊಂದಿದ್ದ ಬ್ರೂನಿ ನಂತರ ನಿಕೋಲಾಸ್ ಸರ್ಕೋಜಿ ತೆಕ್ಕೆಗೆ ಸರಿದಿದ್ದರು. ಇವರು ಸರ್ಕೋಜಿಯವರ ಮದುವೆಯನ್ನು ಮುರಿದು ನಂತರ ಅವರನ್ನು ಮದುವೆಯಾಗಿ ಫ್ರೆಂಚ್ ಮೊದಲ ಮಹಿಳೆಯಾಗಿದ್ದರು. ಇವರಿಗೆ ಸಾಥ್ ನೀಡಿರುವ ಮತ್ತೊಬ್ಬ ಫ್ರೆಂಚ್ ನಟಿ ಇಸಬೆಲ್ ಅದ್ಜಾನಿ. ಈಕೆ ನೈತಿಕವಾಗಿ ಕುಲಗೆಟ್ಟವಳು ಎಂದು ಪತ್ರಿಕೆ ಜರೆದಿದೆ.