ತಾನು ಮುಸ್ಲಿಮ್ ಜನಾಂಗಕ್ಕೆ ಸೇರಿದವನು ಹಾಗೂ ತನ್ನ ಜನನ ಸ್ಥಳದ ಕುರಿತಂತೆ ಆನ್‌ಲೈನ್ ಮಾಧ್ಯಮದಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ.
ಅಮೆರಿಕದ ಪ್ರತಿ ಐದು ಮಂದಿ ಪ್ರಜೆಗಳಲ್ಲಿ ಒಬ್ಬರು ಹಾಲಿ ಅಧ್ಯಕ್ಷ ಮುಸ್ಲಿಮ್ ಜಾತಿಗೆ ಸೇರಿದವರು ಎಂದು ಬಲವಾಗಿ ನಂಬಿರುವುದಾಗಿ ಇತ್ತೀಚೆಗಷ್ಟೇ ನೂತನ ಸಮೀಕ್ಷೆಯೊಂದು ಹೊರಬಿದ್ದಿತ್ತು. ತದನಂತರ ಬರಾಕ್ ಅವರು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ವಿನಃ, ಮುಸ್ಲಿಮ್ ಅಲ್ಲ ಎಂದು ಶ್ವೇತಭವನದ ಮೂಲಗಳು ಕೂಡ ಸ್ಪಷ್ಟಪಡಿಸಿದ್ದವು.
ಆದರೆ ಬರಾಕ್ ಜಾತಿ ಮತ್ತು ಜನನ ಸ್ಥಳದ ಕುರಿತಂತೆ ವದಂತಿಗಳು ಹರಿದಾಡುತ್ತಿರುವ ಬಗ್ಗೆ ಅವರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಜನ್ಮ ಸ್ಥಳ ಮತ್ತು ಮುಸ್ಲಿಮ್ ಎಂಬ ಕುರಿತ ಟೀಕೆಗಳಿಗೆ ತಲೆಕೆಡಿಸಿಕೊಳ್ಳಲಾರೆ ಎಂದು ಕತ್ರಿನಾ ಚಂಡಮಾರುತದ ಐದನೇ ವಾರ್ಷಿಕೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ನ್ಯೂ ಓರ್‌ಲ್ಯಾನ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಕೇವಲ ವದಂತಿಗಳನ್ನೇ ಬೆನ್ನಟ್ಟಿ ಉತ್ತರ ನೀಡುತ್ತ ಹೋದರೆ, ನಾನು ಹೆಚ್ಚಿನದೇನನ್ನೂ ಸಾಧಿಸಲು ಸಾಧ್ಯವಾಗಲಾರದು ಎಂದು ಹೇಳಿರುವ ಬರಾಕ್, ಸತ್ಯ ಯಾವಾಗಲೂ ಸತ್ಯದಿಂದಲೇ ಕೂಡಿರುತ್ತದೆ. ನಾನು ಏನು, ಯಾವ ಜಾತಿ ಎಂಬ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಆದರೆ ಆ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೆ ಆ ಬಗ್ಗೆ ಹೆಚ್ಚಿನ ಗಮನ ಕೊಡಲಾರೆ ಎಂದಿದ್ದಾರೆ.
ನಾನು ಯಾವಾಗಲೂ ಅಮೆರಿಕನ್‌ರ ಏಳಿಗೆಗಾಗಿಯೇ ದುಡಿಯುವವನು. ಹಾಗಾಗಿ ವದಂತಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.