ಜರ್ದಾರಿ ಮೇಲೆ ಶೂ ಎಸೆದವನನ್ನು ಒಪ್ಪಿಸಿ: ಬ್ರಿಟನ್‌ಗೆ ಪಾಕ್
ಲಾಹೋರ್, ಸೋಮವಾರ, 30 ಆಗಸ್ಟ್ 2010( 19:37 IST )
ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಬರ್ಮಿಂಗ್‌ಹ್ಯಾಮ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಮಿಮ್ ಖಾನ್ ಎಂಬಾತ ಶೂ ಎಸೆದಿದ್ದು, ಆ ನಿಟ್ಟಿನಲ್ಲಿ ಆತನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕೆಂದು ಬ್ರಿಟನ್ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.
ಪಾಕಿಸ್ತಾನದಲ್ಲಿ ನೆರೆ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದ ವೇಳೆಯಲ್ಲಿ ಜರ್ದಾರಿ ಬ್ರಿಟನ್ ಭೇಟಿಯ ಅಗತ್ಯವಿತ್ತೇ ಎಂದು ಆಕ್ರೋಶ ವ್ಯಕ್ತಪಡಿಸಿ ಖಾನ್ ಜರ್ದಾರಿ ಮೇಲೆ ಶೂ ಎಸೆದಿದ್ದ. ಆದರೆ ಶೂ ಜರ್ದಾರಿಗೆ ತಗುಲದೆ ಸಮೀಪದಲ್ಲೇ ಬಿದ್ದಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಆಂತರಿಕ ಸಚಿವಾಲಯ ಖಾನ್ ವಿರುದ್ಧದ ಕ್ರಿಮಿನಲ್ ದಾಖಲೆಗಳನ್ನು ಬ್ರಿಟನ್ ಅಧಿಕಾರಿಗಳಿಗೆ ನೀಡಿದ್ದಾರೆ. ಅಲ್ಲದೇ ಆತನನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿಕೊಂಡಿದೆ.
ಖಾನ್ ಆಜಾದ್ ಕಾಶ್ಮೀರದ ಪಾಲೈ ಗಾಲಾದ ಶೆನ್ಸಾ ಪ್ರದೇಶದ ನಿವಾಸಿಯಾಗಿದ್ದು, ಕೊಲೆ ಪ್ರಕರಣವೊಂದರ ಕುರಿತಂತೆ ಆತನನ್ನು ತಲೆತಪ್ಪಿಸಿಕೊಂಡ ಆರೋಪಿ ಎಂದು ಘೋಷಿಸಲಾಗಿತ್ತು.
1993ರಲ್ಲಿ ಖಾನ್ ವ್ಯಕ್ತಿಯೊಬ್ಬರಿಗೆ ಗುಂಡಿಕ್ಕಿದ್ದ, ಅಲ್ಲದೇ ಆ ಸಂದರ್ಭದಲ್ಲಿ ಆತ ಬ್ರಿಟನ್‌ಗೆ ಪರಾರಿಯಾಗಲು ಯಶಸ್ವಿಯಾಗಿದ್ದ. ಈ ಬಗ್ಗೆ ಖಾನ್ ವಿರುದ್ಧ ಪಾಲೈ ಗಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.