ಯೂರೋಪ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂದು ರೋಮ್‌ಗೆ ಭೇಟಿ ನೀಡಿರುವ ಲಿಬಿಯಾ ನಾಯಕ ಮೋಮರ್ ಗಡಾಫಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಟಲಿ ಪ್ರವಾಸದಲ್ಲಿರುವ ಗಡಾಫಿ ಭಾನುವಾರ ಪ್ರವಚನ ಕಾರ್ಯಕ್ರಮವೊಂದರಲ್ಲಿ ಹೀಗೆ ಹೇಳಿದ್ದಾರೆ. ಈ ಸಮಾರಂಭಕ್ಕೆ 500 ಯುವತಿಯರ ಗುಂಪನ್ನು ಹಣ ಕೊಟ್ಟು ಏಜೆನ್ಸಿಯೊಂದು ಕರೆಸಿಕೊಂಡಿತ್ತು ಎಂದು ವರದಿಗಳು ಹೇಳಿವೆ.
ಸಮಾರಂಭದ ನಂತರ ಇದರಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬಳು ಗಡಾಫಿ ಹೇಳಿರುವುದನ್ನು ಪತ್ರಿಕೆಗಳಿಗೆ ತಿಳಿಸಿದ್ದಾಳೆ. ಯೂರೋಪಿನ ಪ್ರತಿಯೊಬ್ಬರ ಧರ್ಮ ಇಸ್ಲಾಂ ಆಗಬೇಕು ಎಂದು ಗಡಾಫಿ ಹೇಳಿದ್ದಾರೆ ಎಂದು ಆಕೆ ಖಚಿತಪಡಿಸಿದ್ದಾಳೆ.
ಬಹುತೇಕ ವಿದ್ಯಾರ್ಥಿನಿಯರನ್ನೇ ಈ ಸಭೆಗೆ ಬಾಡಿಗೆಗೆ ಕರೆ ತರಲಾಗಿತ್ತು. ಅವರಿಗೆ 70ರಿಂದ 80 ಯೂರೋಗಳನ್ನು ನೀಡಲಾಗಿತ್ತು. ಅದೇ ಹೊತ್ತಿಗೆ ತಮ್ಮ ಹೆಸರುಗಳನ್ನು ಪತ್ರಿಕೆಗಳಿಗೆ ಬಹಿರಂಗಪಡಿಸಿದವರಿಗೆ ಏಜೆನ್ಸಿ ಹಣ ನೀಡಿಲ್ಲ ಎಂದು ಹೇಳಲಾಗಿದೆ.
ಗಡಾಫಿ ಪ್ರವಚನ ಕೇಳಲು ಕರೆಸಲಾದ ಹುಡುಗಿಯರಿಗೆ ಸಾಂಪ್ರದಾಯಿಕ ಉಡುಗೆಗಳನ್ನು ತೊಡುವಂತೆ ಏಜೆನ್ಸಿ ಸೂಚನೆ ನೀಡಿತ್ತು.
ಸೋಮವಾರ ಗಡಾಫಿಯವರಿಂದ ಎರಡನೇ ಪ್ರವಚನ ಕಾರ್ಯಕ್ರಮ ನಡೆದಿದೆ. ರೋಮ್‌ನ ಲಿಬಿಯನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಈ ಸಮಾರಂಭಕ್ಕೆ 200 ಯುವತಿಯರು ಬಂದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗಡಾಫಿ, ಪಾಶ್ಚಿಮಾತ್ಯ ದೇಶಗಳಿಗಿಂತ ಲಿಬಿಯಾದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡಲಾಗುತ್ತಿದೆ. ಇದಕ್ಕೆ ಲಿಬಿಯನ್ ಗಂಡಂದಿರೂ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ಇಸ್ಲಾಮ್ ಎನ್ನವುದು ಕಟ್ಟಕಡೆಯ ಧರ್ಮ. ನಾವು ಏಕಮೇವ ನಂಬಿಕೆಯನ್ನು ಹೊಂದಿರಬೇಕೆಂದು ಬಯಸುವುದಾದರೆ, ಅದಕ್ಕಿರುವ ಏಕೈಕ ಮಾರ್ಗವೆಂದರೆ ಮೊಹಮ್ಮದ್ ಎಂದಿದ್ದಾರೆ.
ಗಡಾಫಿಯವರು ಈ ರೀತಿಯಾಗಿ ನೀಡಿರುವ ಹೇಳಿಕೆಗೆ ಇಟಲಿಯ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಯೂರೋಪನ್ನು ಇಸ್ಲಾಮೀಕರಣಗೊಳಿಸುವ ತಂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.