ಬ್ರಿಟನ್ ಅಧಿಕಾರಿಯೊಬ್ಬರು ತಿರುಗು ಕುರ್ಚಿಯಿಂದ ಕೆಳಗೆ ಉರುಳಿಬಿದ್ದು ತೀವ್ರ ಗಾಯಗೊಂಡಿದ್ದು, ಈ ಬಗ್ಗೆ ಸರಕಾರದ ಇಲಾಖೆ ವಿರುದ್ಧ ಸುಮಾರು 300,000 ಪೌಂಡ್ಸ್ ಪರಿಹಾರ ನೀಡಬೇಕೆಂದು ದೂರು ದಾಖಲಿಸಿರುವ ಘಟನೆಯೊಂದು ನಡೆದಿದೆ.
ಕುರ್ಚಿಯಿಂದ ಕೆಳಗೆ ಬಿದ್ದ ಪರಿಣಾಮ ತಲೆ ಗೋಡೆಗೆ ಬಡಿದ ಪರಿಣಾಮ ಗಿಯನ್ ಪೌಲ್ ಡೆ ವಿಟೋ ಟ್ರೆಸೈ(39) ಶೇ.80ರಷ್ಟು ತೊಂದರೆಗೆ ಒಳಗಾಗಿರುವುದಾಗಿ ದಿ ಸನ್ ಪತ್ರಿಕೆ ವರದಿ ತಿಳಿಸಿದೆ.
ಪೌಲ್ ಅವರು ವರ್ಕ್ ಅಂಡ್ ಪೆನ್‌ಶನ್ಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರಿಗೆ ಇಲಾಖೆ ಹೊಸದಾಗಿ ನೀಡಿದ್ದ ತಿರುಗು ಕುರ್ಚಿಯಿಂದ ಅವರು 2008ರಲ್ಲಿ ಕೆಳಗೆ ಉರುಳಿ ಬಿದ್ದಿದ್ದರು. ಇದರಿಂದಾಗಿ ತನ್ನ ಕಕ್ಷಿದಾರರು ಜೀವಮಾನ ಪರ್ಯಂತ ಕೆಲಸ ಮಾಡದ ಸ್ಥಿತಿಗೆ ತಲುಪಿದ್ದಾರೆ. ಹಾಗಾಗಿ ಅವರಿಗೆ ಸರಕಾರ 300,000 ಪರಿಹಾರ ಕೊಡಬೇಕೆಂದು ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿರುವುದಾಗಿ ವರದಿ ವಿವರಿಸಿದೆ.
ತಲೆಗೆ ಮತ್ತು ಕೈ-ಕಾಲುಗಳಿಗೆ ಬಲವಾದ ಏಟು ಬಿದ್ದಿದ್ದರಿಂದ ಅವರಿಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ನೆನಪಿನ ಶಕ್ತಿ ಕೂಡ ಕುಂದಿದೆ. ನೋವಿನಿಂದ ಪೌಲ್ ನರಳುತ್ತಿದ್ದು, ಉಲ್ಲಾಸದಾಯಕ ಶಕ್ತಿಯನ್ನೇ ಕಳೆದುಕೊಂಡಿದ್ದಾರೆಂದು ಅವರ ವಕೀಲರು ವಾದಿಸಿದ್ದಾರೆ.