ತಮ್ಮ ಮದುವೆಗೆ ನಿರಂತರವಾಗಿ ಅಡ್ಡಗಾಲಿಡುತ್ತಿರುವ, ಮದುವೆಯಾಗದಂತೆ ತಡೆಯುತ್ತಿರುವ ತಂದೆಯ ವಿರುದ್ಧ ಆರು ಮಂದಿ ಸೌದಿ ಅರೇಬಿಯಾದ ಸಹೋದರಿಯರು ತಿರುಗಿ ಬಿದ್ದಿದ್ದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
30ರ ಆಸುಪಾಸಿನಲ್ಲಿರುವ ಯುವತಿಯರು ಸೌದಿ ಅರೇಬಿಯಾದ ವಕೀಲರ ಸಮಿತಿಯ ಅಧ್ಯಕ್ಷರಾಗಿರುವ ಸುಲ್ತಾನ್ ಬಿನ್ ಜಾಹೆಮ್ ಅವರಿಗೆ ಪತ್ರ ಬರೆದಿದ್ದಾರೆ. ತಮಗೆ ಮದುವೆಯಾಗುವ ಹಕ್ಕನ್ನು ನೀಡಬೇಕು ಎಂದು ಆರು ಮಂದಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ತಮ್ಮ ಮದುವೆಯ ಕುರಿತು ತಂದೆಯಲ್ಲಿ ಪ್ರಸ್ತಾಪಿಸಿದಾಗಲೆಲ್ಲ ನಮ್ಮ ಬೇಡಿಕೆಗಳನ್ನು ತಳ್ಳಿ ಹಾಕುತ್ತಾ ಬರಲಾಗಿದೆ. ಮದುವೆಯ ಸಂಪ್ರದಾಯಗಳನ್ನು ಪೂರೈಸಲು ಮನೆಯಲ್ಲಿ ಬೇರೆ ಮಹಿಳೆಯರು ಇಲ್ಲದೇ ಇರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ತಂದೆಯ ವಿರುದ್ಧ ಪುತ್ರಿಯರು ಆರೋಪಿಸಿದ್ದಾರೆ.
ಧಾರ್ಮಿಕ ಶ್ರದ್ಧೆಯುಳ್ಳ ಮತ್ತು ಉತ್ತಮ ನಡತೆಯ ಹಲವು ಮಂದಿ ನಮ್ಮನ್ನು ಮದುವೆಯಾಗಲು ಮುಂದೆ ಬಂದರೂ ತಂದೆ ಅವಕಾಶ ನೀಡಿಲ್ಲ ಎಂದು ತಮ್ಮ ಪತ್ರದಲ್ಲಿ ಸುಲ್ತಾನ್ ಅವರಿಗೆ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸುಲ್ತಾನ್, ಯುವತಿಯರು ತಮ್ಮ ಹೆತ್ತವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಹಾಗೆ ಮಾಡಿದಲ್ಲಿ ನ್ಯಾಯಾಧೀಶರು ಯುವತಿಯರ ತಂದೆಗೆ ಸಮನ್ಸ್ ನೀಡಬಹುದು. ಪುತ್ರಿಯರಿಗೆ ಯಾಕೆ ಮದುವೆ ಮಾಡಿಸುತ್ತಿಲ್ಲ ಎಂದು ಪ್ರಶ್ನಿಸಬಹುದು ಎಂದಿದ್ದಾರೆ.
ಆಗ ಯುವತಿಯರ ತಂದೆ ನೀಡುವ ಉತ್ತರವು ಸಮರ್ಪಕವಾಗಿ ಇರದೇ ಇದ್ದಲ್ಲಿ, ನ್ಯಾಯಾಧೀಶರು ಸೂಕ್ತ ವ್ಯಕ್ತಿಗಳ ಜತೆ ಅವರ ಮದುವೆ ಮಾಡಿಸುವ ಅಧಿಕಾರವನ್ನು ಚಲಾಯಿಸಬಹುದು ಎಂದು ಸುಲ್ತಾನ್ ವಿವರಣೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಜೀವನದ ಹಕ್ಕಿನ ಕುರಿತು ಯುವತಿಯರು ಬೇಡಿಕೆ ಮುಂದಿಟ್ಟಿರುವುದರಿಂದ ಅವರು ನೀಡಿರುವ ದೂರನ್ನು ಹೆತ್ತವರ ಅವಿಧೇಯತೆ ಎಂದು ಪರಿಗಣಿಸುವುದು ಸಾಧ್ಯವಿಲ್ಲ ಎಂದು ಇನ್ನೊಬ್ಬ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಸಲಹೆಗಳ ಹಿನ್ನೆಲೆಯಲ್ಲಿ ಯುವತಿಯರು ಇದೀಗ ತಂದೆಯ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ.