ಇಲ್ಲೊಬ್ಬಳು ಬ್ರಿಟೀಷ್ ಯುವತಿಗೆ ಬಾಳೆಹಣ್ಣು ಕಂಡರೆ ಆಗಲ್ವಂತೆ. ಬಾಳೆಹಣ್ಣು ಕಂಡ ಕೂಡಲೇ ಏದುಸಿರು ಬಿಟ್ಟು, ಬೆವರುವುದಲ್ಲದೆ, ವಾಂತಿ ಮಾಡುತ್ತಾಳಂತೆ.
ಹೌದು, ಆಕೆಯ ಹೆಸರು ಫ್ರಾನ್ ದಾಂಡೋ. ವಿಚಿತ್ರವೆಂದರೆ ಆಕೆಯ ಎರಡು ವರ್ಷದ ಮಗ ಹ್ಯಾರಿಸನ್‌ಗೆ ಬಾಳೆಹಣ್ಣೆಂದರೆ ಪಂಚಪ್ರಾಣ. ಹಾಗಾಗಿ ಕೈಗೆ ರಬ್ಬರ್ ಗವಸುಗಳನ್ನು ತೊಟ್ಟು ಕಷ್ಟಪಟ್ಟು ಬಾಳೆಹಣ್ಣುಗಳನ್ನು ಆತನಿಗೆ ತಿನ್ನಿಸುತ್ತಾಳಂತೆ.
ಪೂರ್ವ ಸಸೆಕ್ಸ್‌ನ ಹಾಸ್ಟಿಂಗ್ ಎಂಬಲ್ಲಿನ ಫ್ರಾನ್ ತನ್ನ ಕಷ್ಟವನ್ನು ವಿವರಿಸಿರುವುದು ಹೀಗೆ.
ನನ್ನ ಮಗ ಇನ್ನೂ ಪುಟ್ಟದಾಗಿರುವ ಕಾರಣ ಆತನ ವಿಚಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಆದರೆ ಬೇರೆ ಯಾರಾದರೂ ಬಾಳೆ ಹಣ್ಣನ್ನು ತಂದರೆಂದರೆ ಅಥವಾ ಮನೆಯಲ್ಲಿ ಯಾರಾದರೂ ಇಟ್ಟಿದ್ದರೆ ನಾನು ತಕ್ಷಣವೇ ಆ ಕೊಠಡಿಯಿಂದ ಹೊರಗೆ ಬರುತ್ತೇನೆ ಎನ್ನುತ್ತಾಳೆ.
ಇದು ತೀರಾ ಮುಜುಗರ ತರಿಸುತ್ತದೆ. ಹಾಗೆಂದೇ ಬಾಣೆಹಣ್ಣಿನ ಕುರಿತ ಹೆದರಿಕೆ ತೊಲಗಿಸಬೇಕೆಂದು ನನ್ನ ಗೆಳತಿಯರು ಸಾಕಷ್ಟು ಯತ್ನಿಸಿದ್ದಾರೆ. ಆದರೆ ಇದುವರೆಗೂ ಅದರಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಫ್ರಾನ್ ವಿವರಣೆ ನೀಡಿದ್ದಾಳೆ.
ಫ್ರಾನ್ ಏಳು ವರ್ಷದ ಬಾಲಕಿಯಾಗಿದ್ದಾಗ ಆಕೆಯ ಸಹೋದರ ಬಾಳೆಹಣ್ಣನ್ನು ಬೆಡ್‌ನಲ್ಲಿ ಅಡಗಿಸಿಟ್ಟಿದ್ದನಂತೆ. ಅದರ ನಂತರ ಫ್ರಾನ್‌ಗೆ ಈ ಹೆದರಿಕೆ ಹುಟ್ಟಿಕೊಂಡಿತ್ತು.
ನನ್ನ ಬೆನ್ನಿನಡಿಯಲ್ಲಿ ಏನೋ ಅಸಹ್ಯ ವಸ್ತುವೊಂದು ಇದೆ ಎಂದುಕೊಂಡಿದ್ದೆ. ನನ್ನ ಜೀವವೇ ಹೊರಟು ಹೋಯಿತು ಎಂಬ ಭಾವನೆ ನನಗುಂಟಾಗಿತ್ತು. ತಕ್ಷಣವೇ ಏದುಸಿರು ಬಿಡುತ್ತಾ ಬೆವರು ಹುಟ್ಟಿಕೊಂಡಿತ್ತು. ತೀವ್ರವಾಗಿ ಹೆದರಿ ಹೋಗಿದ್ದೆ. ಆ ಬಳಿಕ ಬಾಳೆಹಣ್ಣನ್ನು ನೋಡಿದ ಕೂಡಲೇ ಅದೇ ರೀತಿಯ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ ಎಂದು ಫ್ರಾನ್ ಹೇಳಿದ್ದಾಳೆ.