ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಭಾರತದ ಮದರ್ ಥೆರೆಸಾ ಅವರ ಗೌರವಾರ್ಥ ಯುಎಸ್ ಪೋಸ್ಟಲ್ ಸರ್ವಿಸ್ ವಿಭಾಗವು ಸೆಪ್ಟೆಂಬರ್ ಐದರಂದು ಅಮೆರಿಕಾದಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದೆ.
1979ರಲ್ಲಿ ತನ್ನ ಮಾನವೀಯ ಕಾರ್ಯಗಳಿಗಾಗಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಮದರ್ ಥೆರೆಸಾ ಅವರಿಗೆ ಯುಎಸ್ ಪೋಸ್ಟಲ್ ಸರ್ವಿಸ್ ಈ ಮೂಲಕ ಗೌರವ ಸಲ್ಲಿಸಲಿದೆ ಎಂದು ಯುಎಸ್‌ಪಿಎಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬಡವರು ಮತ್ತು ಸಂಕಷ್ಟಗಳಿಂದ ಬಳಲುತ್ತಿದ್ದವರ ಕಡೆ ಅಪಾರ ಒಲವು ವ್ಯಕ್ತಪಡಿಸುತ್ತಿದ್ದ ರೋಮನ್ ಕ್ಯಾಥೊಲಿಕ್ ಕ್ರೈಸ್ತ ಸನ್ಯಾಸಿನಿ ಹಾಗೂ ಅಮೆರಿಕಾದ ಗೌರವ ಪೌರತ್ವ ಹೊಂದಿದ್ದ ಮದರ್ ಥೆರೆಸಾ, ಭಾರತ ಮತ್ತು ವಿಶ್ವದ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಅಮೆರಿಕಾದ ಅಂಚೆ ಇಲಾಖೆ ಅಭಿಪ್ರಾಯಪಟ್ಟಿದೆ.
ವಾಷಿಂಗ್ಟನ್‌ನಲ್ಲಿ ಸೆಪ್ಟೆಂಬರ್ ಐದರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಯಾಗಲಿದೆ.
ಪ್ರಶಸ್ತಿ ವಿಜೇತ ಕಲಾವಿದ ಕೊಲಾರಾಡೋದ ಥಾಮಸ್ ಬ್ಲಾಕ್‌ಶೀರ್ II ಬರೆದಿರುವ ಮದರ್ ಥೆರೆಸಾ ಅವರ ಕಲಾಕೃತಿಯನ್ನು ಅಂಚೆ ಚೀಟಿಯಲ್ಲಿ ಬಳಸಲಾಗುತ್ತದೆ.
ಗಣ್ಯರನ್ನು, ಪ್ರದೇಶಗಳನ್ನು ಮತ್ತು ಸಂಸ್ಥೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಅಮೆರಿಕಾದ ಅಂಚೆ ಇಲಾಖೆಯು ಪ್ರತಿವರ್ಷ ಈ ರೀತಿ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ.