ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರನ್ನು 2008ರಲ್ಲಿ ಆತ್ಮಹತ್ಯಾ ದಾಳಿ ಮೂಲಕ ಹತ್ಯೆಗೈಯಲು ಯತ್ನಿಸಿದ್ದ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ಮಂಗಳವಾರ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ರಾವಲ್ಪಿಂಡಿಯ ಅಡಿಲಾ ಜೈಲಿನಲ್ಲಿ ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜಾ ಅಖ್ಲಾಕ್ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದರು.
ಆರು ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಪ್ರತಿಯೊಬ್ಬರಿಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಏತನ್ಮಧ್ಯೆ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರದ ಕೊರತೆಯ ಹಿನ್ನೆಲೆಯಲ್ಲಿ ಕೋರ್ಟ್ ಏಳು ಮಂದಿಯನ್ನು ಖುಲಾಸೆಗೊಳಿಸಿದೆ.
2008ರ ಜೂನ್ 6ರಂದು ರಾವಲ್ಪಿಂಡಿಯ ಢೋಕ್ ಕಾಲಾ ಖಾನ್ ಎಂಬಲ್ಲಿ ಶಂಕಿತ 13 ಮಂದಿ ಉಗ್ರರು 300 ಕೆಜಿ ಸ್ಫೋಟ ಮತ್ತು ಡಿಟೋನೇಟರ್ ಅನ್ನು ತುಂಬಿಸಿಕೊಂಡಿದ್ದ ವಾಹನದ ಸಹಿತ ಭದ್ರತಾ ಪಡೆ ಸಿಬ್ಬಂದಿಗಳು ಸೆರೆ ಹಿಡಿದಿದ್ದರು. ಇವರೆಲ್ಲ ಅಧ್ಯಕ್ಷ ಮುಷರ್ರಫ್ ಅವರ ಹತ್ಯೆಗೆ ಸಂಚು ರೂಪಿಸಿರುವುದಾಗಿ ಫೆಡರಲ್ ತನಿಖಾ ಸಂಸ್ಥೆ ಆರೋಪ ಪಟ್ಟಿ ಸಲ್ಲಿಸಿತ್ತು.
ಆದರೆ ತಮ್ಮ ಕಕ್ಷಿದಾರರ ಬಗ್ಗೆ ಸರಿಯಾದ ವಿಚಾರಣೆ ನಡೆಸದೆ, ಶಿಕ್ಷೆ ವಿಧಿಸಲಾಗಿದೆ ಎಂದು ಆರೋಪಿಸಿರುವ ಆರೋಪಿಗಳ ಪರ ವಕೀಲರು ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.