ವೇಶ್ಯಾಗೃಹದಲ್ಲಿ ಭಾರತೀಯನೊಬ್ಬನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಯಾಗಿರುವ ಒಂಬತ್ತು ಮಂದಿ ವಿಯೆಟ್ನಾಮ್ ಪ್ರಜೆಗಳಿಗೆ ಗಲ್ಲುಶಿಕ್ಷೆಯಾಗುವ ಸಾಧ್ಯತೆಗಳಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಕುಡಿದ ನಶೆಯಲ್ಲಿದ್ದ ಭಾರತೀಯ ವೇಶ್ಯಾಗೃಹದ ಒಳ ಹೋಗಲು ಗಾರ್ಡ್ಸ್ ಜೊತೆ ವಾದ ಮಾಡುತ್ತಿದ್ದ ಸಂದರ್ಭದಲ್ಲಿ ಆತನ ಮೇಲೆ ಹಲ್ಲೆ ನಡೆಸಿ ಕೊಲೆಗೈಯಲಾಗಿದೆ ಎಂದು ಕೋರ್ಟ್‌ಗೆ ವಿವರಿಸಲಾಗಿದೆ.
ಮೂರು ಮಂದಿ ಭಾರತೀಯ ಚಾಲಕರು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅತಿಯಾಗಿ ಮದ್ಯ ಸೇವಿಸಿ ವೇಶ್ಯಾಗೃಹಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ವೇಶ್ಯೆಯ ಜೊತೆ ವಾಗ್ವಾದ ನಡೆಸತೊಡಗಿದ್ದನ್ನು ಗಮನಿಸಿ ಆಕೆ ಗಾರ್ಡ್ಸ್ ಅನ್ನು ಕರೆದಿದ್ದಳು. ನಿಮ್ಮನ್ನು ಒಳ ಬಿಡಲು ಸಾಧ್ಯವಿಲ್ಲ ಇಲ್ಲಿಂದ ಹೊರಡಿ ಎಂದು ಗಾರ್ಡ್ಸ್ ಸೂಚಿಸಿದ್ದರು. ಆದರೆ ಅದಕ್ಕೆ ಅವರು ಒಪ್ಪದ ಜಗಳ ಮುಂದುವರಿಸಿದ್ದರು.
ಏತನ್ಮಧ್ಯೆ ಗಾರ್ಡ್ಸ್ ದೂರವಾಣಿ ಕರೆ ಮಾಡಿ ಮತ್ತೆ ಎಂಟು ಮಂದಿಯನ್ನು ವೇಶ್ಯಾಗೃಹಕ್ಕೆ ಕರೆಯಿಸಿದ್ದ. ಆ ದಾಂಡಿಗರು ಮೂವರು ಭಾರತೀಯರ ಮೇಲೆ ಹಲ್ಲೆ ನಡೆಸಿದರು. ಆ ಸಂದರ್ಭದಲ್ಲಿ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದರು. ಆದರೆ ಒಬ್ಬ ಭಾರತೀಯ ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದ.
ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿರುವ ದುಬೈ ಕ್ರಿಮಿನಲ್ ಕೋರ್ಟ್ ನ್ಯಾಯಾಧೀಶ ಎಲ್ ಸಯೀದ್ ಬ್ರಾಗೌಥ್ ಅವರು, ವಿಯೆಟ್ನಾಮಿ ಭಾಷಾಂತರಕಾರನ್ನು ನೇಮಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ. ಒಟ್ಟು ಒಂಬತ್ತು ಆರೋಪಿಗಳ ವಿರುದ್ಧ ಕೊಲೆ ಮೊಕದ್ದಮೆ ದಾಖಲಾಗಿದ್ದು, ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಪತ್ರಿಕೆಯ ವರದಿ ತಿಳಿಸಿದೆ.