ಪಾಕಿಸ್ತಾನದ ವಾಯುವ್ಯದ ಬುಡಕಟ್ಟು ಪ್ರಾಂತ್ಯದಲ್ಲಿನ ಭಯೋತ್ಪಾದಕರ ಅಡಗುದಾಣಗಳ ಮೇಲೆ ಪಾಕ್ ಮಿಲಿಟರಿಯು ನಡೆಸಿರುವ ವಾಯುದಾಳಿಯಲ್ಲಿ ನಾಗರಿಕರು ಸೇರಿದಂತೆ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 55ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರು ನಾಗರಿಕರನ್ನು ತಮ್ಮ ರಕ್ಷಣೆಯ ಅಸ್ತ್ರಗಳಾಗಿ ಬಳಸಿದ್ದು, ದಾಳಿಯ ಸಂದರ್ಭದಲ್ಲಿ ನಾಗರಿಕರು ಕೂಡ ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಆದರೆ ಎಷ್ಟು ಮಂದಿ ಎಂಬುದರ ಕುರಿತು ಖಚಿತ ಮಾಹಿತಿಗಳಿಲ್ಲ ಎಂದು ತಿರಾಹ್ ಕಣಿವೆಯಲ್ಲಿ ಬಲಿಯಾದವರ ಒಟ್ಟು ಸಂಖ್ಯೆಯನ್ನು ನೀಡುತ್ತಾ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ವಿವರಣೆ ನೀಡಿದ್ದಾರೆ.
ಉಗ್ರರ ಅಡಗುದಾಣಗಳಿಗೆ ಪಾಕಿಸ್ತಾನಿ ವಾಯುಪಡೆ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 55 ಎಂದು ಇಬ್ಬರು ಮಿಲಿಟರಿ ಹಾಗೂ ಬೇಹುಗಾರಿಕಾ ಅಧಿಕಾರಿಗಳು ಕೂಡ ಖಚಿತಪಡಿಸಿದ್ದಾರೆ.
ಈ ನಡುವೆ ಹೇಳಿಕೆ ನೀಡಿರುವ ಸ್ಥಳೀಯ ಸರಕಾರವು, ಘಟನೆಯಲ್ಲಿ ಕನಿಷ್ಟ ಡಜನ್ ನಾಗರಿಕರು ಬಲಿಯಾಗಿದ್ದಾರೆ ಎಂದಿದೆ.