ಇಸ್ಲಾಮಾಬಾದ್, ಗುರುವಾರ, 2 ಸೆಪ್ಟೆಂಬರ್ 2010( 12:46 IST )
ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು ಬುಧವಾರ ರಾತ್ರಿ ನಿಷೇಧಿತ ತೆಹ್ರೀಕ್ ಇ ತಾಲಿಬಾನ್ ಉಗ್ರಗಾಮಿ ಸಂಘಟನೆ ಲಾಹೋರ್‌ನಲ್ಲಿ ಶಿಯಾ ಮೆರವಣಿಗೆ ಮೇಲೆ ಮೂರು ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ 29 ಮಂದಿ ಬಲಿಯಾಗಿದ್ದು, 200ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ನಗರದಲ್ಲಿ ಸಂಭವಿಸಿದ ಮೂರು ದಾಳಿಯ ಹಿಂದೆ ತಮ್ಮ ಸಂಘಟನೆಯೇ ಹೊಣೆ ಎಂದು ತಾಲಿಬಾನ್ ಮುಖಂಡ ಖ್ವಾರಿ ಹುಸೈನ್ ಮಾಧ್ಯಮಗಳಿಗೆ ರವಾನಿಸಿರುವ ಸಂದೇಶದಲ್ಲಿ ತಿಳಿಸಿದ್ದಾನೆ.
ಮೊದಲ ಸ್ಫೋಟವನ್ನು ಟೈಮರ್ ಅಳವಡಿಸಿ ಸ್ಫೋಟಿಸಲಾಗಿತ್ತು. ಮತ್ತೆರಡು ಆತ್ಮಹತ್ಯಾ ಬಾಂಬರ್ ದಾಳಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಸೆಪ್ಟೆಂಬರ್ 1ರ ಹಜ್ರಾತ್ ಅಲಿ ದಿನದಂದು ಲಾಹೋರ್‌ನಲ್ಲಿ ಶಿಯಾ ಮೆರವಣಿಗೆ ನಡೆಸುತ್ತಿದ್ದ ವೇಳೆ ಮೂರು ಆತ್ಮಹತ್ಯಾ ದಾಳಿ ನಡೆಸಿದ್ದು ನಾವೇ ಎಂದು ಹೊಣೆ ಹೊತ್ತುಕೊಂಡಿರುವ ತಾಲಿಬಾನ್ ಮುಖಂಡ ಖ್ವಾರಿ ಹುಸೈನ್ ಮಾಧ್ಯಮಕ್ಕೆ ಕಳುಹಿಸಿರುವ ಆಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಶಿಯಾ ಉಗ್ರರು ಮೌಲಾನಾ ಅಲಿ ಶಾಹ್ರಿ ಹೈದ್ರಿ ಅವರನ್ನು ಹತ್ಯೆದಿರುವುದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಖ್ವಾರಿ ಆರೋಪಿಸಿದ್ದಾನೆ. ಶಿಯಾ ಮೆರವಣಿಗೆಯೊಳಗೆ ಪ್ರವೇಶಿಸಿರುವ ತಾಲಿಬಾನ್ ಆತ್ಮಾಹುತಿ ಬಾಂಬರ್‌ಗಳ ಧೈರ್ಯ ಶ್ಲಾಘನೀಯವಾದದ್ದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾನೆ. ಇನ್ನು ಮುಂದೆಯೂ ಇಸ್ಲಾಮ್‌ನ ಉಲೇಮಾರನ್ನು ಕೊಲ್ಲುವುದನ್ನು ನಿಲ್ಲಿಸದಿದ್ದರೆ ಮತ್ತಷ್ಟು ದಾಳಿ ನಡೆಸುವುದಾಗಿಯೂ ಖ್ವಾರಿ ಎಚ್ಚರಿಕೆ ನೀಡಿದ್ದಾನೆ.