ನ್ಯೂಯಾರ್ಕ್, ಗುರುವಾರ, 2 ಸೆಪ್ಟೆಂಬರ್ 2010( 16:38 IST )
ಪ್ರಜೆಗಳು ಹೆಚ್ಚೆಚ್ಚು ಸಿಗರೇಟುಗಳನ್ನು ಸೇದಬೇಕು ಮತ್ತು ಮಾದಕ ಪೇಯಗಳನ್ನು ಕುಡಿಯಬೇಕು ಎಂದಿರುವ ರಷ್ಯಾ ಹಣಕಾಸು ಸಚಿವ ಅಲೆಕ್ಸೈ ಕುದ್ರಿನ್, ಇದರಿಂದ ಬರುವ ತೆರಿಗೆ ಆದಾಯವನ್ನು ಸಾಮಾಜಿಕ ಸೇವೆಗಳಿಗಾಗಿ ವ್ಯಯ ಮಾಡಲು ಸಹಾಯವಾಗುತ್ತದೆ ಎಂದಿದ್ದಾರೆ.
ನೀವು ಒಂದು ಪ್ಯಾಕೇಟು ಸಿಗರೇಟು ಸೇದುತ್ತೀರಿ ಎಂದಾದರೆ ಹೆಚ್ಚುತ್ತಿರುವ ಜನಸಂಖ್ಯೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಜನಸಂಖ್ಯೆ ಹೆಚ್ಚಳವನ್ನು ತಡೆಯುವುದು ಸೇರಿದಂತೆ ಇತರ ಸಮಸ್ಯೆಗಳಿಗೆ ಸಹಕರಿಸುತ್ತಿದ್ದೀರಿ ಎಂದೇ ಅರ್ಥ ಎಂದು ಪತ್ರಿಕೆಯೊಂದಿಗೆ ಮಾತನಾಡುತ್ತಾ ಕುದ್ರಿನ್ ಅಭಿಪ್ರಾಯಪಟ್ಟರು.
ಯಾರು ಕುಡಿಯುತ್ತಾರೋ, ಯಾರು ಧೂಮಪಾನ ಮಾಡುತ್ತಾರೋ, ಅವರು ದೇಶಕ್ಕೆ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಮದ್ಯ ಮತ್ತು ಸಿಗರೇಟುಗಳ ಮೇಲಿನ ಸುಂಕವನ್ನು ಏರಿಕೆ ಮಾಡುವ ನಿರ್ಧಾರವನ್ನು ರಷ್ಯಾ ಸರಕಾರ ಪ್ರಕಟಿಸಿದೆ.
ರಷ್ಯಾದಲ್ಲಿ ಆಲ್ಕೋಹಾಲ್ ಮತ್ತು ಸಿಗರೇಟು ಸೇವಕರ ಸಂಖ್ಯೆ ಈಗಾಗಲೇ ಗರಿಷ್ಠ ಮಟ್ಟದಲ್ಲಿದೆ. ಅಂದಾಜುಗಳ ಪ್ರಕಾರ ಶೇ.65ರಷ್ಟು ಪುರುಷರು ಧೂಮಪಾನ ಮಾಡುತ್ತಾರೆ ಮ್ತತು ಪ್ರತಿಯೊಬ್ಬ ರಷ್ಯಾ ಪ್ರಜೆ ವರ್ಷವೊಂದಕ್ಕೆ 18 ಲೀಟರುಗಳಷ್ಟು ಮದ್ಯ ಸೇವಿಸುತ್ತಾರೆ ಎಂದು ಇತ್ತೀಚೆಗಷ್ಟೇ 'ನ್ಯೂಯಾರ್ಕ್ ಪೋಸ್ಟ್' ಪತ್ರಿಕೆ ವರದಿ ಮಾಡಿತ್ತು.
ರಷ್ಯಾದಲ್ಲಿ ಸಿಗರೇಟು ಪ್ಯಾಕ್ ಒಂದಕ್ಕೆ ಸರಿಸುಮಾರ್ 1.30 ಡಾಲರುಗಳನ್ನು ವಿಧಿಸಲಾಗುತ್ತಿದೆ. ಫಿಲ್ಟರ್‌ರಹಿತ ಸಿಗರೇಟುಗಳನ್ನು ಇದಕ್ಕಿಂತ ಕಡಿಮೆ ದರದಲ್ಲಿ ಮಾರಲಾಗುತ್ತಿದೆ.