ಪಿಒಕೆಯಲ್ಲಿ ನಮ್ಮ ಸೇನೆ ಇಲ್ಲ- ಬರೇ ಸುಳ್ಳು ಸುದ್ದಿ: ಚೀನಾ ವರಸೆ
ಬೀಜಿಂಗ್, ಗುರುವಾರ, 2 ಸೆಪ್ಟೆಂಬರ್ 2010( 17:28 IST )
ಪಾಕಿಸ್ತಾನದ ವಿವಾದಿತ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂಬ ವರದಿಯನ್ನು ಚೀನಾ ಗುರುವಾರ ಸಾರಸಗಟಾಗಿ ತಳ್ಳಿಹಾಕಿದೆ.
ಪಾಕ್ ಆಕ್ರಮಿತ ಕಾಶ್ಮೀರದ ವಾಯುವ್ಯ ಪ್ರದೇಶದ ಗಿಲ್‌ಗಿಟ್‌ನಲ್ಲಿ ಚೀನಾ ತನ್ನ ಪೀಪಲ್ಸ್ ಲಿಬರೇಷನ್ ಆರ್ಮಿಯ ಸುಮಾರು 11 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿರುವುದಾಗಿ ದಿ ನ್ಯೂಯಾರ್ಕ್ ಟೈಮ್ಸ್ ಕಳೆದ ವಾರ ಸುದ್ದಿ ಪ್ರಕಟಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ಮಿಲಿಟರಿ ಪಡೆ ಬೀಡುಬಿಟ್ಟಿದೆ ಎಂಬ ವರದಿ ಸಂಪೂರ್ಣ ಆಧಾರ ರಹಿತವಾದದ್ದು, ಇದೊಂದು ಉದ್ದೇಶಪೂರ್ವಕವಾಗಿ ಹಬ್ಬಿಸಿರುವ ವದಂತಿ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಿಯಾಂಗ್ ಯೂ ತಿಳಿಸಿದ್ದಾರೆ.
ಕೆಲವು ದುಷ್ಟಶಕ್ತಿಗಳು ಚೀನಾ, ಪಾಕಿಸ್ತಾನ ಹಾಗೂ ಭಾರತ ನಡುವಿನ ಸಂಬಂಧವನ್ನು ಹಾಳುಗೆಡವಲು ಇಂತಹ ಪ್ರಯತ್ನ ನಡೆಸುತ್ತಿರುವುದಾಗಿ ಚೀನಾ ಆಪಾದಿಸಿದೆ. ಆದರೆ ಅವರ ಪ್ರಯತ್ನ ಫಲಿಸುವುದಿಲ್ಲ ಎಂದು ಚೀನಾ ಪ್ರತಿಕ್ರಿಯಿಸಿದೆ.
ಆದರೆ ಚೀನಾ ಇತ್ತೀಚೆಗಷ್ಟೇ ಭಾರತದ ಹಿಡಿತದಲ್ಲಿದ್ದ ಕಾಶ್ಮೀರ ಮಿಲಿಟರಿ ಜನರಲ್‌ಗೆ ವೀಸಾ ನಿರಾಕರಿಸಿತ್ತು. ಇದರಿಂದಾಗಿ ಕುಪಿತಗೊಂಡ ಭಾರತ ಚೀನಾ ಜೊತೆಗಿನ ಎಲ್ಲಾ ರೀತಿಯ ಮಿಲಿಟರಿ ಸಂಬಂಧವನ್ನು ರದ್ದುಪಡಿಸಿತ್ತು. ಅಲ್ಲದೇ ಚೀನಾ ಸದ್ದಿಲ್ಲದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಸೇನೆಯನ್ನು ನಿಯೋಜಿಸುವ ಮೂಲಕ ಭಾರತಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ. ಆ ನಿಟ್ಟಿನಲ್ಲಿ ಭಾರತದ ವಿರುದ್ಧ ಪಾಕ್, ಚೀನಾ ಒಗ್ಗೂಡಿ ಹೊಸ ನಾಟಕ ಆರಂಭಿಸಿದೆ.