ಇಸ್ಲಾಮಾಬಾದ್, ಗುರುವಾರ, 2 ಸೆಪ್ಟೆಂಬರ್ 2010( 19:21 IST )
ಪಾಕಿಸ್ತಾನದ ಬಂದರು ನಗರಿ ದಕ್ಷಿಣ ಕರಾಚಿಯ ಜೈಲಿನಿಂದ ಗುರುವಾರ ನೂರು ಮಂದಿ ಭಾರತೀಯ ಮೀನುಗಾರರನ್ನು ಪಾಕ್ ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ. ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಸುಮಾರು 442 ಮೀನುಗಾರರನ್ನು ಬಿಡುಗಡೆ ಮಾಡಲು ಪಾಕ್ ನಿರ್ಧರಿಸಿದೆ.
ಇಂದು ಬೆಳಿಗ್ಗೆ ಮಾಲಿರ್ ಜೈಲ್‌ನಿಂದ ನೂರು ಮಂದಿ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದೆ. ಬಂಧಮುಕ್ತ ಮೀನುಗಾರರನ್ನು ವಾಘಾ ಗಡಿಯ ಮೂಲಕ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಹಂತವಾಗಿ ಆಗೋಸ್ಟ್ 30ರಂದು ನೂರು ಮಂದಿ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿತ್ತು. ಎರಡನೇ ಹಂತವಾಗಿ ಸೆ.2ರಂದು ನೂರು ಮಂದಿಯನ್ನು ಬಂಧಮುಕ್ತಗೊಳಿಸಲಾಗಿದೆ. ಮೂರು ಮತ್ತು ನಾಲ್ಕನೇ ತಂಡವನ್ನು ಸೆ.4 ಮತ್ತು 6ರಂದು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪಾಕಿಸ್ತಾನದ ಕರಾವಳಿ ಗಡಿಭಾಗವನ್ನು ಉಲ್ಲಂಘಿಸಿ ಒಳಪ್ರವೇಶಿಸಿದ ಮೀನುಗಾರರನ್ನು ಬಂಧಿಸಲಾಗಿತ್ತು. ಬಂಧಿತರು ಮೂರು ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸಿದ್ದರು.