ಮಲೇಶ್ಯಾದ ಮನೆಯೊಂದರಲ್ಲಿ ಕೂಡಿಹಾಕಿದ್ದ 24 ಮಂದಿ ಭಾರತೀಯರನ್ನು ಪೊಲೀಸರು ಪತ್ತೆ ಹಚ್ಚಿ ರಕ್ಷಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮಾನವ ಕಳ್ಳಸಾಗಣೆ ಮಾಡಿ ಭಾರತೀಯರನ್ನು ಕೂಡಿಹಾಕಿದ್ದ ಪ್ರಕರಣದಲ್ಲಿ ಶಾಮೀಲಾಗಿದ್ದ ಇಬ್ಬರು ಪಾಕಿಸ್ತಾನಿಯರನ್ನು ಬಂಧಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಕಳ್ಳಸಾಗಣೆ ಮೂಲಕ ಭಾರತೀಯರನ್ನು ಬಂಧಿಸಿಡಲಾಗಿದೆ ಎಂಬ ಮಾಧ್ಯಮದ ವರದಿಯ ಜಾಡು ಹಿಡಿದು ತೀವ್ರ ಶೋಧ ಕಾರ್ಯಾಚರಣೆಗಿಳಿದ ಮಲೇಷ್ಯಾ ಪೊಲೀಸರು ಕೊನೆಗೂ ಸಂಗಾಯ್ ಸಿಪುಟ್ ನಗರದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ಕಳ್ಳಸಾಗಣೆ ಮೂಲಕ ಭಾರತೀಯರನ್ನು ಕರೆತಂದು ಪೆನಾಂಗ್ ಪ್ರದೇಶದಲ್ಲಿರುವ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದರು ಎಂದು ಅಪರಾಧ ಪತ್ತೆ ದಳದ ಮುಖ್ಯಸ್ಥ ಇಬ್ರಾಹಿಂ ತಿಳಿಸಿದ್ದಾರೆ.
20ರಿಂದ 30 ವರ್ಷದ ಪ್ರಾಯದ ಉತ್ತರ ಪ್ರದೇಶದ ವ್ಯಕ್ತಿಗಳನ್ನು ಕಳ್ಳಸಾಗಣೆ ಮೂಲಕ ಮಲೇಷ್ಯಾದಲ್ಲಿ ಕೂಡಿ ಹಾಕಿದ್ದರು ಎಂದು ತನಿಖೆಯಲ್ಲಿ ಪತ್ತೆಯಾಗಿತ್ತು. ಅವರೆಲ್ಲರನ್ನೂ ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ನಾಲ್ಕು ತಿಂಗಳ ಹಿಂದೆ ಕರೆ ತರಲಾಗಿತ್ತು ಎಂದು ವಿವರಿಸಿದ್ದಾರೆ.