ಭಿಕ್ಷುಕನ ಸೋಗಿನಲ್ಲಿ 23,000 ಪೌಂಡ್ (ಸುಮಾರು 17 ಲಕ್ಷ ರೂಪಾಯಿ) ಹಣವನ್ನು ಸಂಗ್ರಹಿಸಿದ್ದ ಬ್ರಿಟನ್ ಪ್ರಜೆಯೊಬ್ಬನಿಗೆ ನ್ಯಾಯಾಲಯವು ದಂಡ ವಿಧಿಸಿದೆ.
ಸ್ಕ್ರಫಿ ಡೇನಿಯಲ್ ಟೆರಿ ಎಂಬಾತನೇ ಈ ಕುಬೇರ ಭಿಕ್ಷುಕ. ಈತ ತಾನು ನಿರಾಶ್ರಿತ ಎಂದು ಹೇಳಿಕೊಳ್ಳುತ್ತಾ ಅಂಗಡಿ-ಮಳಿಗೆಗಳ ಹೊರಗೆ ಮಲಗಿಕೊಂಡು ಕರುಣೆ ಗಿಟ್ಟಿಸಿಕೊಂಡು ಹಣ ಸಂಪಾದಿಸಿದ್ದ.
ಮಾಜಿ ಎಸ್ಟೇಟ್ ಏಜೆಂಟ್ ಆಗಿರುವ ಟೆರಿ ಈ ಸಂದರ್ಭದಲ್ಲಿ ದಿನವೊಂದಕ್ಕೆ 50 ಪೌಂಡುಗಳಂತೆ (ಸುಮಾರು 3,600 ರೂಪಾಯಿ) ಸಂಪಾದನೆ ಮಾಡುತ್ತಿದ್ದ. ವಾರಾಂತ್ಯ ಅಥವಾ ವಿಶೇಷ ದಿನಗಳಲ್ಲಿ ಆತನ ಗಳಿಕೆ 100 ಪೌಂಡುಗಳನ್ನು ದಾಟುತ್ತಿತ್ತು.
ಟೆರಿಯ ಈ ವ್ಯವಹಾರದ ಕುರಿತು ಪತ್ರಿಕೆಯೊಂದು ವರದಿ ಮಾಡಿದ ನಂತರ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿದ್ದರು.
ವರದಿಗಳ ಪ್ರಕಾರ 31ರ ಹರೆಯದ ಈತ ಈಸ್ಟ್ ಮಿಡ್‌ಲ್ಯಾಂಡ್ಸ್ ಪ್ರಾಂತ್ಯದ ಲಿಂಕನ್ ಜಿಲ್ಲೆಯ ಬೀದಿಗಳಲ್ಲಿ ಒಂದು ವರ್ಷದ ಕಾಲ ಭಿಕ್ಷೆ ಬೇಡುವ ನಾಟಕವಾಡಿ ಲಕ್ಷಾಂತರ ಸಂಪಾದಿಸಿದ್ದ.
ವರ್ಷಕ್ಕೆ 4,000 ಪೌಂಡುಗಳನ್ನು ಸರಕಾರದಿಂದ ಪಡೆಯುತ್ತಿದ್ದ ಈತ 27,000 ಪೌಂಡುಗಳನ್ನು ತೆರಿಗೆ ರಹಿತವಾಗಿ ಉಳಿಯುವಂತೆ ಚಾಣಾಕ್ಷತನ ಪ್ರದರ್ಶಿಸಿದ್ದ. ಅಚ್ಚರಿಯ ವಿಚಾರವೆಂದರೆ ಕೆಲಸ ಮಾಡುವ ಬ್ರಿಟನ್ ಪ್ರಜೆಯೊಬ್ಬನ ಸಂಪಾದನೆ ವರ್ಷಕ್ಕೆ 25,000 ಪೌಂಡ್ ಆಗಿರುವುದು. ಟೆರಿಯ ಸಂಪಾದನೆ ಅದನ್ನೂ ಮೀರಿತ್ತು.
ಟೆರಿಗೆ ಮನೆಯಿದ್ದು, ಆತ ಸರಕಾರಿ ಯೋಜನೆಗಳ ಫಲಾನುಭವಿಯಾಗಿದ್ದಾನೆ. ನಿಜಕ್ಕೂ ಈ ರೀತಿ ಸೋಗು ಹಾಕುತ್ತಾ ಸರಕಾರಕ್ಕೆ ಮೋಸ ಮಾಡಿರುವುದು ನಾಚಿಕೆಗೇಡಿ ವರ್ತನೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.