ನ್ಯೂಯಾರ್ಕ್, ಶುಕ್ರವಾರ, 3 ಸೆಪ್ಟೆಂಬರ್ 2010( 18:01 IST )
2001ರ ಸೆಪ್ಟೆಂಬರ್ 11ರಂದು ಒಸಾಬಾ ಬಿನ್ ಲಾಡೆನ್ ಪಡೆಯಿಂದ ಧ್ವಂಸಗೊಂಡಿದ್ದ ವಿಶ್ವ ವ್ಯಾಪಾರ ಕೇಂದ್ರದ ಸ್ಥಳದಲ್ಲಿ ವಿವಾದಕ್ಕೊಳಗಾಗಿರುವ ಮುಸ್ಲಿಂ ಸಾಮುದಾಯಿಕ ಕೇಂದ್ರ ಮತ್ತು ಮಸೀದಿಯನ್ನು ನಿರ್ಮಾಣ ಮಾಡುವುದಕ್ಕೆ ನ್ಯೂಯಾರ್ಕ್ ನಗರದ ಬಹುತೇಕ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ನಡೆಸಿರುವ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಮೂರನೇ ಎರಡರಷ್ಟು ನ್ಯೂಯಾರ್ಕಿಗಳ ಪ್ರಕಾರ ಸಮುದಾಯ ಕೇಂದ್ರ ಮತ್ತು ಮಸೀದಿಯನ್ನು 'ಗ್ರೌಂಡ್ ಜೀರೋ'ದಿಂದ ದೂರದಲ್ಲಿ ನಿರ್ಮಾಣ ಮಾಡಬೇಕು.
ಶೇ.20ರಷ್ಟು ನ್ಯೂಯಾರ್ಕ್ ನಿವಾಸಿಗಳು ಮುಸ್ಲಿಮರತ್ತ ಹಗೆತನದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇತರ ಅಮೆರಿಕಾ ಪ್ರಜೆಗಳಿಗೆ ಹೋಲಿಸಿದರೆ ಮುಸ್ಲಿಮರು ಭಯೋತ್ಪಾದಕರತ್ತ ಅನುಕಂಪ ಹೊಂದಿದ್ದಾರೆ ಎಂದು ಶೇ.33ರಷ್ಟು ಮಂದಿ ಹೇಳಿದ್ದಾರೆ.
ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯಿಂದಾಗಿ ಮುಸ್ಲಿಮರತ್ತ ಋಣಾತ್ಮಕ ಭಾವನೆಗಳನ್ನು ಹೊಂದಿರುವುದಾಗಿ ಜನರು ತಿಳಿದಿದ್ದಾರೆ ಎಂದು ಶೇ.60ರಷ್ಟು ನಿವಾಸಿಗಳು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಒಟ್ಟಾರೆ ಶೇ.50ರಷ್ಟು ಮಂದಿ ವಿಶ್ವ ವ್ಯಾಪಾರ ಕೇಂದ್ರವಿದ್ದ ಸ್ಥಳದಲ್ಲಿ ಮಸೀದಿ ಕಟ್ಟಲು ಅವಕಾಶ ನೀಡುವುದನ್ನು ವಿರೋಧಿಸಿದ್ದಾರೆ. ಅದೇ ಹೊತ್ತಿಗೆ ಈ ರೀತಿಯಾಗಿ ಕಟ್ಟಡ ನಿರ್ಮಾಣಗಾರರು ನಡೆದುಕೊಳ್ಳುತ್ತಾರೆ ಎಂದು ಶೇ.35ರಷ್ಟು ಮಂದಿ ನಂಬಿದ್ದಾರಂತೆ.
ಶೇ.67ರಷ್ಟು ಜನತೆ ಮುಸ್ಲಿಮರು ತಮ್ಮ ಕೇಂದ್ರವನ್ನು ನಿರ್ಮಿಸುವ ಹಕ್ಕನ್ನು ಹೊಂದಿದ್ದಾರೆ, ಅದು ಗ್ರೌಂಡ್ ಜೀರೋದಿಂದ ದೂರದಲ್ಲಿರಬೇಕು ಎಂದಿದ್ದಾರೆ.