ಪಾಕಿಸ್ತಾನದ ನೈರುತ್ಯ ಭಾಗದ ಕ್ವೆಟ್ಟಾ ಪ್ರದೇಶದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆ ಶುಕ್ರವಾರ ಮತ್ತೆ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ ಪರಿಣಾಮ 54 ಶಿಯಾ ಮುಸ್ಲಿಮರು ಬಲಿಯಾಗಿರುವ ಘಟನೆ ನಡೆದಿದೆ.
ಈ ದಾಳಿಯ ಹೊಣೆಯನ್ನು ಕೂಡ ತಾಲಿಬಾನ್ ಸಂಘಟನೆಯ ಪಾಕಿಸ್ತಾನ್ ಕಮಾಂಡರ್ ಖ್ವಾರಿ ಹುಸೈನ್ ಮೆಹ್ಸೂದ್ ಹೊಣೆ ಹೊತ್ತುಕೊಂಡಿದ್ದು, ಅಮೆರಿಕ, ಪಾಕಿಸ್ತಾನ ಸರಕಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾನೆ. ಅಲ್ಲದೆ, ಶಿಯಾ ಸಮುದಾಯ ಕೂಡ ತಮ್ಮ ಮುಂದಿನ ಗುರಿ ಎಂದು ಎಚ್ಚರಿಕೆ ನೀಡಿದ್ದಾನೆ.
ನೈರುತ್ಯ ನಗರದ ಕ್ವೆಟ್ಟಾದಲ್ಲಿ ಶಿಯಾ ಸಮುದಾಯ ಬೃಹತ್ ರಾಲಿ ನಡೆಸುತ್ತಿದ್ದ ವೇಳೆ ತಾಲಿಬಾನ್ ಉಗ್ರರು ಈ ಆತ್ಮಹತ್ಯಾ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದಲ್ಲಿ 54 ಮಂದಿ ಬಲಿಯಾಗಿದ್ದು, 78 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ ಎಂದು ವಿವರಿಸಿದ್ದಾರೆ.
ಏಕಾಏಕಿ ಆತ್ಮಹತ್ಯಾ ಬಾಂಬರ್ ತಮ್ಮನ್ನು ತಾವೇ ಸ್ಫೋಟಿಸಿಕೊಂಡ ಪರಿಣಾಮ ಬೀದಿ ತುಂಬಾ ಕಪ್ಪು ಹೊಗೆ ತುಂಬಿಕೊಂಡಿತ್ತು. ಮೋಟಾರ್ ಸೈಕಲ್, ಕಾರುಗಳು ಸುಟ್ಟುಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಾಕಿಸ್ತಾನಿ ತಾಲಿಬಾನ್ ಸಂಘಟನೆ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಕಪ್ಪು ಪಟ್ಟಿಗೆ ಸೇರಿಸಿತ್ತು. ಸಂಘಟನೆಯ ವರಿಷ್ಠ ಹಕಿಮುಲ್ಲಾ ಮೆಹ್ಸೂದ್ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿತ್ತು. ಅದಕ್ಕೆ ಪ್ರತೀಕಾರ ಎಂಬಂತೆ ತಾಲಿಬಾನ್ ಮತ್ತೆ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ.
ಬುಧವಾರವಷ್ಟೇ ಲಾಹೋರ್ ನಗರದಲ್ಲಿ ಶಿಯಾ ಸಮುದಾಯದ ಮೆರವಣಿಗೆ ಸಾಗುತ್ತಿದ್ದ ವೇಳೆ ತಾಲಿಬಾನ್ ಉಗ್ರರು ಮೂರು ಬಾಂಬ್ ದಾಳಿ ನಡೆಸಿದ ಪರಿಣಾಮ 33 ಜನರು ಸಾವನ್ನಪ್ಪಿದ್ದರು. ಶುಕ್ರವಾರ ಬೆಳಿಗ್ಗೆ ಕೂಡ ಎರಡು ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ಹತರಾಗಿದ್ದರು.