ದಕ್ಷಿಣ ಮೆಕ್ಸಿಕೋದಲ್ಲಿ ಲಘು ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮೆಕ್ಸಿಕೋದ ಇಬ್ಬರು ಸಚಿವರು, ಮೇಯರ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿರುವುದಾಗಿ ಅಟಾರ್ನಿ ಜನರಲ್ ಕಚೇರಿ ಮೂಲಗಳು ತಿಳಿಸಿವೆ.
ಲಘು ವಿಮಾನ ಮೆಕ್ಸಿಕೋ ನಗರದಿಂದ ಹೊರಟು ಓಕ್ಸಾಕಾ ನೈರುತ್ಯ ಪ್ರದೇಶದ ಪೆಸಿಫಿಕ್ ಬೀಚ್ ರೆಸಾರ್ಟ್‌ನ ಹುಟುಲೋಚೋ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ದುರಂತ ಸಂಭವಿಸಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
ವಿಮಾನ ದುರಂತದಲ್ಲಿ ಇಬ್ಬರು ಸಚಿವರು, ಓಕ್ಸಾಕಾ ಮೇಯರ್, ಪೈಲಟ್ ಹಾಗೂ ಇನ್ನಿಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಇಬ್ಬರು ಸಚಿವರಾದ ಗುಲ್ಲೆರ್‌ಮೋ ಜಾವಾಲೆಟಾ ಮತ್ತು ಜುವಾನ್ ಹುರೆಟಾ ಸಾವನ್ನಪ್ಪಿರುವುದಾಗಿ ನ್ಯಾಷನಲ್ ಆಕ್ಷನ್ ಪಾರ್ಟಿಯ ಅಧ್ಯಕ್ಷ ಫಿಲಿಪ್ ಕಾಲ್‌ಡ್ರೆನ್ ಖಚಿತಪಡಿಸಿದ್ದಾರೆ.
ಲಘು ವಿಮಾನ ಪತನಕ್ಕೆ ಹದಗೆಟ್ಟ ವಾತಾವರಣ ಅಥವಾ ಪೈಲಟ್‌ನ ತಪ್ಪಿನಿಂದಾಗಿ ಸಂಭವಿಸಿರಬೇಕೆಂದು ಅಟಾರ್ನಿ ಜನರಲ್ ಕಚೇರಿ ಮೂಲಗಳು ಶಂಕಿಸಿವೆ.