ಇಸ್ಲಾಮಾಬಾದ್, ಶನಿವಾರ, 4 ಸೆಪ್ಟೆಂಬರ್ 2010( 16:31 IST )
ಮುಂಬೈ ದಾಳಿ ಸಂಬಂಧ ಲಷ್ಕರ್ ಇ ತೋಯ್ಬಾದ ಝಾಕೀರಿ ರೆಹಮಾನ್ ಲಖ್ವಿ ಮತ್ತು ಇತರ ಆರು ಮಂದಿಯ ವಿರುದ್ಧದ ವಿಚಾರಣೆ ಮುಂದುವರಿಯುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಪಾಕಿಸ್ತಾನ ಈಗ ಆಯೋಗವೊಂದನ್ನು ಅಸ್ತಿತ್ವಕ್ಕೆ ತರುವ ಹೊಸ ನಾಟಕಕ್ಕೆ ಮುಂದಾಗಿದೆ.
ಈ ಆಯೋಗ ಜಾರಿಗೆ ಬಂದು ವಿಚಾರಣೆ ಸುಸೂತ್ರವಾಗಿ ಸಾಗಬೇಕಾದರೆ ಅದಕ್ಕೆ ಇಬ್ಬರು ಭಾರತೀಯ ಸಾಕ್ಷಿಗಳು ನೇರವಾಗಿ ಸಾಕ್ಷಿ ಹೇಳಬೇಕಾಗುತ್ತದೆ. ಇದನ್ನು ದಾಖಲಿಸಿಕೊಳ್ಳಲು ಪಾಕಿಸ್ತಾನವು ತನ್ನ ಅಧಿಕಾರಿಗಳನ್ನು ಭಾರತಕ್ಕೆ ರವಾನಿಸುತ್ತದೆ.
ಮುಂಬೈ ದಾಳಿ ಪ್ರಕರಣದ ವಿಚಾರಣೆಯು ಸುಸೂತ್ರವಾಗಿ ನಡೆಯುತ್ತಿಲ್ಲ ಎಂದು ಭಾರತೀಯ ರಾಯಭಾರಿ ಶರತ್ ಸಬರ್ವಾಲ್ ಅವರು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಅವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದಾಗ ಸಚಿವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಈ ಹಿಂದೆ ಹೇಳಿದಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಸಾಕ್ಷಿದಾರರು ಪಾಕಿಸ್ತಾನದ ನ್ಯಾಯಾಲಯಕ್ಕೆ ಹೇಳಿಕೆ ನೀಡುವುದು ಪಾಕ್ ಕಾನೂನಿನ ಪ್ರಕಾರ ಸಾಧ್ಯವಿಲ್ಲ. ಇದಕ್ಕೆ ಪಾಕ್ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಇದೀಗ ಕ್ಯಾತೆ ತೆಗೆಯಲಾಗುತ್ತಿದೆ.
ಆಯೋಗಕ್ಕೆ ನೇಮಕಗೊಳ್ಳುವ ಸೂಕ್ತ ಅಧಿಕಾರಿಗಳು ಭಾರತಕ್ಕೆ ಬಂದು ಓರ್ವ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಾರೆ. ಈ ಕುರಿತು ತಾನು ಭಾರತದ ಗೃಹಸಚಿವ ಪಿ. ಚಿದಂಬರಂ ಅವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚಿದಂಬರಂ, ಪಾಕಿಸ್ತಾನದ ಪ್ರಸ್ತಾಪದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದರು ಎಂದೂ ಮಲಿಕ್ ವಿವರಣೆ ನೀಡಿದ್ದಾರೆ.
ಮುಂಬೈ ದಾಳಿಯ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ತಡೆ ನ್ಯಾಯಾಲಯವು ಭಾರತ ಹೇಳುತ್ತಿರುವಂತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷಿಗಳನ್ನು ಪ್ರಮಾಣೀಕರಿಸುವ ಕುರಿತು ಇದುವರೆಗೂ ನಿರ್ಧಾರ ಕೈಗೊಂಡಿಲ್ಲ. ಒಟ್ಟಾರೆ ವಿಚಾರಣೆಯು ಸುಸೂತ್ರವಾಗಿ ಮುಂದುವರಿಯುತ್ತಿಲ್ಲ ಎಂದು ಮಲಿಕ್ ತಿಳಿಸಿದ್ದಾರೆ.
ವಿಚಾರಣೆ ಮುಂದುವರಿಯುವುದು ಅಗತ್ಯವಿದೆ ಎಂದಿರುವ ಸಚಿವರು, ಅದೇ ಕಾರಣದಿಂದ ನಾನು ಚಿದಂಬರಂ ಜತೆ ಆಯೋಗದ ಪ್ರಸ್ತಾಪವನ್ನು ಇಟ್ಟಿದ್ದೇನೆ ಎಂದರು.