ವೆಲ್ಲಿಂಗ್ಟನ್, ಶನಿವಾರ, 4 ಸೆಪ್ಟೆಂಬರ್ 2010( 20:20 IST )
ನ್ಯೂಜಿಲ್ಯಾಂಡ್‌ನ ದಕ್ಷಿಣ ದ್ವೀಪಪ್ರದೇಶದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಕಟ್ಟಡಗಳು ನೆಲಸಮವಾಗಿದ್ದು, ರಸ್ತೆ, ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದ್ದು, ಕ್ರಿಸ್ಟ್‌ಚರ್ಚ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ನ್ಯೂಜಿಲ್ಯಾಂಡ್‌ನ ಬೃಹತ್ ನಗರದಲ್ಲಿ ನಡೆದಿರುವ ಭಾರೀ ಪ್ರಮಾಣದ ಭೂಕಂಪನದಿಂದಾಗಿ ಜನ ತತ್ತರಿಸಿಹೋಗಿದ್ದಾರೆ. ಆದರೆ ಪ್ರಬಲ ಭೂಕಂಪ ಸಂಭವಿಸಿದ್ದರೂ ಕೂಡ ಅಚ್ಚರಿ ಎಂಬಂತೆ ಕೇವಲ ಇಬ್ಬರು ಮಾತ್ರ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಹೆಚ್ಚಿನ ಜನರು ನಿದ್ದೆಯ ಮಂಪರಿನಲ್ಲಿದ್ದಾಗ (ಮುಂಜಾನೆ ವೇಳೆ) ಈ ಭೂಕಂಪ ಸಂಭವಿಸಿದೆ.ಲೈಟ್ಟೆಲ್ಟಂನ್ ಬಂದರು ಪ್ರದೇಶದಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಆದರೆ ತ್ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕ್ರಿಸ್ಟ್‌ಚರ್ಚ್ ಸೇರಿದಂತೆ ನಗರದಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಪ್ರವಾಹದ ನೀರು ಉಕ್ಕಿ ಬರುವ ಹಿನ್ನೆಲೆಯಲ್ಲಿ ಕ್ರಿಸ್ಟ್‌ಚರ್ಚ್ಸ್ ಕರಾವಳಿ ಪ್ರದೇಶದ ಸುಮಾರು ಸಾವಿರ ಮಂದಿ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಎಲ್ಲಾ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದಕ್ಷಿಣ ದ್ವೀಪ ಪ್ರದೇಶದಲ್ಲಿನ ರೈಲ್ವೆ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.