ವ್ಯಭಿಚಾರಕ್ಕಾಗಿ ಕಲ್ಲು ಹೊಡೆದು ಸಾಯಿಸಬೇಕು ಎಂದು ಸಕೀನೇಹ್ ಮೊಹಮ್ಮದಿ ಅಸ್ತಿಯಾನಿ ಎಂಬ ಮಹಿಳೆಗೆ ಶಿಕ್ಷೆ ಘೋಷಿಸಿದ್ದ ಇರಾನ್, ಇದೀಗ ಮುಖ ಪರದೆಯಿಲ್ಲದೆ ಭಾವಚಿತ್ರ ಪ್ರಕಟವಾಗಿರುವುದಕ್ಕೆ 99 ಛಡಿಯೇಟುಗಳ ಶಿಕ್ಷೆಯನ್ನು ನೀಡಲು ಮುಂದಾಗಿದೆ.
ಆಕೆಯ ಜತೆಗಿದ್ದ ಕೈದಿಗಳು ಇದನ್ನು ತಿಳಿಸಿದ್ದಾರೆಂದು ಸಕೀನೇಹ್ ಪುತ್ರ ಸಜ್ಜದ್ ಫ್ರೆಂಚ್ ಪತ್ರಿಕೆಗಳಿಗೆ ಇದನ್ನು ಬಹಿರಂಗಪಡಿಸಿದ್ದಾನೆ.
ಬ್ರಿಟೀಷ್ ಪತ್ರಿಕೆಯೊಂದರಲ್ಲಿ ಪ್ರಕಟವಾದ ಭಾವ ಚಿತ್ರವೊಂದರಲ್ಲಿ ನನ್ನ ತಾಯಿ ಮುಖ ಪರದೆ ಧರಿಸದೆ ಇದ್ದುದಕ್ಕಾಗಿ ಇದನ್ನು ಅನಾಚಾರ ಮತ್ತು ಅಸಭ್ಯತೆಯನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಛಡಿಯೇಟು ನೀಡಿರುವುದನ್ನು ಕಾರಾಗೃಹದ ನ್ಯಾಯಾಧೀಶರು ಒಪ್ಪಿಕೊಂಡಿದ್ದಾರೆ ಎಂದು ಪುತ್ರ ತಿಳಿಸಿದ್ದಾನೆ.
ಆಗಸ್ಟ್ 28ರಂದು 'ದಿ ಟೈಮ್ಸ್ ಆಫ್ ಲಂಡನ್' ಪತ್ರಿಕೆಯು ಸಕೀನೇಹ್ ಮೊಹಮ್ಮದಿ ಅಸ್ತಿಯಾನಿ ಎಂಬ ಹೆಸರಿನಲ್ಲಿ ಮುಖಪರದೆಯಿಲ್ಲದ ಭಾವಚಿತ್ರವೊಂದನ್ನು ಪ್ರಕಟಿಸಿತ್ತು. ನಂತರ ಸೆಪ್ಟೆಂಬರ್ ಮೂರರಂದು ಇದಕ್ಕೆ ಸ್ಪಷ್ಟನೆ ನೀಡಿದ್ದ ಪತ್ರಿಕೆ, ಈ ಭಾವಚಿತ್ರವನ್ನು ನಮಗೆ ನೀಡಿದ್ದು ಇದೀಗ ಇರಾನ್‌ನಿಂದ ಪರಾರಿಯಾಗಿರುವ ಆಕೆಯ ಓರ್ವ ವಕೀಲ. ಆದರೆ ಇದು ಸರಿಯಾಗಿರಲಿಲ್ಲ ಎಂದಿತ್ತು.
ಇದನ್ನು ಸಕೀನೇಹ್ ಪುತ್ರ ಸಜ್ಜದ್ ಕೂಡ ಖಚಿತಪಡಿಸಿದ್ದಾನೆ. ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಭಾವಚಿತ್ರ ಖಂಡಿತವಾಗಿಯೂ ನನ್ನ ತಾಯಿಯದ್ದಾಗಿರಲಿಲ್ಲ ಎಂದಿದ್ದಾನೆ.
ವಿವಾಹೇತರ ಸಂಬಂಧ ಹೊಂದಿದ್ದ ಆರೋಪದ ಮೇಲೆ 43ರ ಹರೆಯ ಎರಡು ಮಕ್ಕಳ ತಾಯಿ ಸಕೀನೇಹ್ ಅವರಿಗೆ ಇರಾನ್ ಕಲ್ಲು ಹೊಡೆದು ಸಾಯಿಸುವ ಮರಣ ದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ.