ಬ್ರಿಟನ್‌ನ ಈ 106ರ ಅಜ್ಜಿ ಕೇವಲ ಕನ್ಯೆ ಮಾತ್ರವಲ್ಲ, ಇಷ್ಟರವರೆಗೂ ಒಂದೇ ಒಂದು ಮುತ್ತನ್ನು ಕೂಡ ಪಡೆಯುವುದು ಅಥವಾ ನೀಡಿದವಳಲ್ಲವಂತೆ. ಇದೇ ತನ್ನ ಸುದೀರ್ಘ ಆಯುಷ್ಯಕ್ಕೂ ಕಾರಣ ಎಂದು ವಾದಿಸುತ್ತಾಳೆ ಬೇರೆ.
PR
ಒಂಟಿಯಾಗಿರುವುದರಿಂದ ಜೀವಿತಾವಧಿ ವೃದ್ಧಿಸುತ್ತದೆ ಎಂದು ವಾದ ಮಾಡುತ್ತಿರುವವರಲ್ಲಿ ಕಳೆದ ಶನಿವಾರವಷ್ಟೇ 106ನೇ ಹುಟ್ಟುಹಬ್ಬವನ್ನಾಚರಿಸಿಕೊಂಡ ಇಸಾ ಬ್ಲಿತ್ ಎಂಬ ಈ ಅಜ್ಜಿಯೂ ಸೇರಿದ್ದಾಳೆ.
ಈ ರೀತಿಯಾಗಿ ಯಾರಾದರೂ ಯತ್ನಿಸಿದ್ದಾರೋ, ಇಲ್ಲವೋ ನನಗೆ ತಿಳಿದಿಲ್ಲ. ನನಗಂತೂ ಯಾವತ್ತೂ ರೊಮ್ಯಾನ್ಸ್ ಮಾಡಬೇಕು, ಅದರ ಅಗತ್ಯವಿದೆ, ಒಬ್ಬ ಪುರುಷ ನನಗಾಗಿ ಬೇಕು ಎಂದು ಯಾವತ್ತೂ ಅನ್ನಿಸಿದ್ದೇ ಇಲ್ಲ ಎಂದು ಅಜ್ಜಿ ಹೇಳಿದ್ದಾಳೆ.
1904ರಲ್ಲಿ ಜನಿಸಿದ್ದ ಈಕೆ ಯಾವತ್ತೂ ಒಂದು ಗ್ಲಾಸ್ ಮದ್ಯ ಸೇವಿಸಿಯೂ ಇಲ್ಲವಂತೆ. ಆದರೆ ಫ್ಲವರ್ ಕ್ಲಬ್ ಮತ್ತು ಚರ್ಚುಗಳಿಗೆ ಹೋಗಿ ಹಾಡುತ್ತಿದ್ದಳಂತೆ. ಗಾಲ್ಫ್ ಆಡುವುದು ಕೂಡ ಹವ್ಯಾಸವಾಗಿತ್ತು. ಅಚ್ಚರಿಯೆಂದರೆ ತನ್ನ ಯೌವನದ ಕಾಲದಲ್ಲಿ 35 ವರ್ಷಗಳ ಕಾಲ ಆಕೆ ವಿಸ್ಕಿ ತಯಾರಕನೊಬ್ಬನಿಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಳೆಂಬುದು.
ಆಕೆಗೆ ಚರ್ಚು ಸರ್ವಸ್ವವಾಗಿತ್ತು. ಹಾಡುವುದು ಮತ್ತು ಫ್ಲವರ್ ಕ್ಲಬ್ ಕೂಡ ಆಪ್ತವಾಗಿದ್ದವು. ಸದಾ ಬಿಡುವಿರದ ಉನ್ನತಾಧಿಕಾರದ ಉದ್ಯೋಗವನ್ನೂ ಆಕೆ ಹೊಂದಿದ್ದಳು. ಕುಟುಂಬದ ಮೊದಲ ಮಹಿಳೆಯಾಗಿಯೂ ಕಾರ್ಯನಿರ್ವಹಿಸಿದ್ದಳು. ಯಾಕೆಂದರೆ ಆಕೆಗೆ ಆರು ಮಂದಿ ತಂಗಿ-ತಮ್ಮಂದಿರು ಇದ್ದರು. ಅವರನ್ನೆಲ್ಲ ನಿಭಾಯಿಸುವ ಹೊಣೆಗಾರಿಕೆಯೂ ಹೆಗಲ ಮೇಲಿತ್ತು ಎಂದು ಸೊಸೆ ಶೀನಾ ಹೇಳುತ್ತಾಳೆ.
ಒಂಟಿಯಾಗಿಯೇ ಸೆಂಚೂರಿ ದಾಟಿರುವ ಇಂತಿಪ್ಪ ಅಜ್ಜಿಗೆ ಯಾವತ್ತೂ ಬೇಸರವಾಗಿದ್ದೇ ಇಲ್ಲ. ಆಕೆಯದ್ದು ಅದ್ಭುತ ವ್ಯಕ್ತಿತ್ವ. ಆಕೆಗೆ 106 ವರ್ಷ ಆಗಿದೆ ಎಂಬುದನ್ನೂ ನಂಬಲು ಸಾಧ್ಯವಿಲ್ಲ ಎಂದು ಶೀನಾ ವಿವರಣೆ ನೀಡಿದ್ದಾಳೆ.