ಈದ್ ಮಿಲಾದ್ ಸಂದರ್ಭದಲ್ಲಿ ಪಾಕಿಸ್ತಾನ್‌ನ ತೆಹ್ರೀಕ್ ಇ ತಾಲಿಬಾನ್ ಪ್ರಮುಖ ರಾಜಕಾರಣಿಗಳು ಸೇರಿದಂತೆ ವಿಐಪಿಗಳನ್ನು ಹತ್ಯೆಗೈಯುವ ಸಂಚನ್ನು ರೂಪಿಸಿರುವುದಾಗಿ ಪಾಕಿಸ್ತಾನ್ ಗುಪ್ತಚರ ಇಲಾಖೆ ಅಧಿಕೃತವಾಗಿ ಎಚ್ಚರಿಕೆ ನೀಡಿದೆ.
ರಾಜಕಾರಣಿಗಳು, ಪ್ರತಿಷ್ಠಿತ ವ್ಯಕ್ತಿಗಳನ್ನು ಹತ್ಯೆಗೈಯಲು ತಾಲಿಬಾನ್ ಸಂಚು ರೂಪಿಸಿರುವ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆಹಾಕಿರುವುದಾಗಿ ಗುಪ್ತಚರ ಇಲಾಖೆ ತಿಳಿಸಿದೆ.
ಈದ್ ಮಿಲಾದ್ ಸಂದರ್ಭ ಅಥವಾ ಈದ್ ಉಲ್ ಫಿತರ್ ಪ್ರಾರ್ಥನೆ ವೇಳೆ ಪ್ರಮುಖ ರಾಜಕಾರಣಿಗಳನ್ನು, ಪ್ರತಿಷ್ಠಿತ ವ್ಯಕ್ತಿಗಳನ್ನು ತಾಲಿಬಾನ್ ಉಗ್ರರು ಕೊಲ್ಲಲು ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂಸ್ ಪತ್ರಿಕೆ ವರದಿ ಮಾಡಿದೆ.
ಖೈಬೆರ್ ಪಕ್ತುನ್‌ಖಾವಾ ಪ್ರದೇಶದ ರಾಜಕಾರಣಿಗಳೇ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಇದ್ದಿರುವುದಾಗಿ ವರದಿ ತಿಳಿಸಿದೆ. ಈ ಹಿಟ್‌ಲಿಸ್ಟ್‌ನಲ್ಲಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ಮಾಜಿ ಆಂತರಿಕ ಸಚಿವ ಫೈಸಲ್ ಸಾಲೆಹ್ ಹಯಾತ್, ಖೈಬೆರ್ ಪಕ್ತುನ್‌ಖಾವಾದ ಹಿರಿಯ ಸಚಿವ ಬಶೀರ್ ಅಹ್ಮದ್ ಬಿಲೋರ್, ಮಾಹಿತಿ ತಂತ್ರಜ್ಞಾನ ಸಚಿವ ಮಿಯಾನ್ ಇಫ್ತಿಕರ್ ಹುಸೈನ್ ಹಾಗೂ ಪ್ರೊವಿನ್ಸಿಯಲ್ ಪೊಲೀಸ್ ವರಿಷ್ಠಾಧಿಕಾರಿ ಫೈಯಾಜ್ ಅಹ್ಮದ್ ಟೋರು ಸೇರಿದ್ದಾರೆ ಎಂದು ವರದಿ ಹೇಳಿದೆ.
ಆ ನಿಟ್ಟಿನಲ್ಲಿ ಹಿಟ್‌ಲಿಸ್ಟ್‌ನಲ್ಲಿರುವ ರಾಜಕಾರಣಿಗಳಿಗೆ ಮತ್ತು ಅವರ ಕುಟಂಬಗಳಗೆ ಜೀವ ಬೆದರಿಕೆ ಇರುವುದಾಗಿ ಮಾಹಿತಿ ನೀಡಲಾಗಿದ್ದು, ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.