ನೇಪಾಳ ಸಂಸತ್ ಭಾನುವಾರ ಆರನೇ ಬಾರಿಗೆ ನಡೆಸಿದ ಪ್ರಧಾನಿ ಆಯ್ಕೆಯ ಚುನಾವಣೆಯಲ್ಲಿ ನೂತನ ಪ್ರಧಾನಿ ಆಯ್ಕೆ ವಿಫಲವಾಗುವ ಮೂಲಕ ರಾಜಕೀಯ ಬಿಕ್ಕಟ್ಟು ಮುಂದುವರಿದಂತಾಗಿದೆ.
ಭಾನುವಾರ ನಡೆದ ಚುನಾವಣೆಯಲ್ಲಿಯೂ ಮಾವೋ ಮುಖಂಡ ಪುಷ್ಪಾ ಕಮಲ್ ದಹಾಲ್ ಅಲಿಯಾಸ್ ಪ್ರಚಂಡ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಅಲ್ಲದೇ ಪ್ರಧಾನಿಗಾದಿಯ ಪ್ರತಿಸ್ಪರ್ಧಿಯಾಗಿದ್ದ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ರಾಮಚಂದ್ರ ಪೌಡ್ಯಾಲ್ ಕೂಡ ಬಹುಮತ ಪಡೆಯುವಲ್ಲಿ ವಿಫಲರಾಗುವ ಮೂಲಕ ಪ್ರಧಾನಿ ಆಯ್ಕೆ ಕಗ್ಗಂಟು ಮುಂದುವರಿದಂತಾಗಿದೆ.
ನೇಪಾಳದಲ್ಲಿ ಕಳೆದ ಎರಡು ತಿಂಗಳಿನಿಂದ ಸಂವಿಧಾನಾತ್ಮಕ ಬಿಕ್ಕಟ್ಟು ಮುಂದುವರಿದಿದೆ. ಪ್ರಧಾನಿ ಆಯ್ಕೆಗಾಗಿ ಆರು ಬಾರಿ ಚುನಾವಣೆ ನಡೆದಿದ್ದು, 601 ಸದಸ್ಯ ಬಲದ ನೇಪಾಳ ಸಂಸತ್‌ನಲ್ಲಿ ಇಬ್ಬರೂ ಅಭ್ಯರ್ಥಿಗಳು ಬಹುಮತ ಪಡೆಯುವಲ್ಲಿ ವಿಫಲರಾಗಿದ್ದರು. ಭಾನುವಾರ ನಡೆದ ಚುನಾವಣೆಯಲ್ಲಿ ಪ್ರಚಂಡ 204 ಮತಗಳಿಸಿದ್ದರೆ, 101 ಮತ ವಿರೋಧವಾಗಿ ಚಲಾಯಿಸಿದ್ದರು. ಪ್ರತಿಸ್ಪರ್ಧಿ ಪೌಡ್ಯಾಲ್ ಕೇವಲ 122 ಮತ ಪಡೆದಿದ್ದರೆ, 206 ಸಂಸದರು ವಿರೋಧವಾಗಿ ಮತ ಚಲಾಯಿಸಿದ್ದರು.
ನೂತನ ಪ್ರಧಾನಿ ಆಯ್ಕೆಗಾಗಿ ಆರು ಬಾರಿ ಚುನಾವಣೆ ನಡೆಸಿದ್ದರೂ ಅಭ್ಯರ್ಥಿಗಳು ಬಹುಮತ ಪಡೆಯುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಏಳನೇ ಸುತ್ತಿನ ಚುನಾವಣೆಯನ್ನು ಸೆಪ್ಟೆಂಬರ್ 7ಕ್ಕೆ ನಡೆಸಲಾಗುವುದು ಎಂದು ನೇಪಾಳ್ ಸಂಸತ್ ಭವನದ ಮೂಲಗಳು ತಿಳಿಸಿವೆ.
ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ಸಂವಿಧಾನ ಬಿಕ್ಕಟ್ಟು ಮುಂದುವರಿದಿದ್ದು, ನೂತನ ಪ್ರಧಾನಿ ಆಯ್ಕೆಯೂ ವಿಫಲವಾಗಿದೆ. ಹಾಗಾಗಿ ದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಮೂಲಕ ಬಿಕ್ಕಟ್ಟನ್ನು ಅಂತ್ಯಗೊಳಿಸಬೇಕು ಎಂದು ನೇಪಾಳ್ ಮಜ್ದೂರ್ ಕಿಶನ್ ಪಕ್ಷದ ಮುಖ್ಯಸ್ಥ ನಾರಾಯಣ್ಮನ್ ಬಿಜುಚ್ಚೆ ಚುನಾವಣೆ ಪ್ರಕ್ರಿಯೆ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದರು.